ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸದೆ 23ನೇ ಸಾಹಿತ್ಯ ಸಮ್ಮೇಳನವನ್ನು ವಿಜಯಪುರದಲ್ಲಿ ನಡೆಸಲು ಮುಂದಾಗಿರುವ ಬೆಂ.ಗ್ರಾ ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ನಡೆಗೆ ತಾಲೂಕಿನ ಕನ್ನಡ ಪರ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಈ ಮೊದಲೇ ನಿಗದಿಯಾಗಿದ್ದ ಸಮ್ಮೇಳನವನ್ನು ನಿಯಮಾನುಸಾರ ನಡೆಸುವಂತೆ ಆಗ್ರಹಿಸಿದ್ದಾರೆ.
ನಗರ ಕನ್ನಡ ಜಾಗೃತ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಸಾಪ ಮಾಜಿ ಜಿಲ್ಲಾ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ಪರಿಷತ್ತಿನ ಶಿಷ್ಠಾಚಾರವನ್ನು ಮೀರಿ ಜಿಲ್ಲಾಧ್ಯಕ್ಷರು ಸ್ವಯಂ ನಿರ್ಧಾರಗಳ ಮೂಲಕ ಪರಿಷತ್ತಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿದ್ದ ಸಮ್ಮೇಳನವನ್ನು ನಡೆಸದೆ ವಿಜಯಪುರದಲ್ಲಿ ಮತ್ತೊಂದು ಸಮ್ಮೇಳನ ನಡೆಸಲು ಮುಂದಾಗಿರುವುದು ಖಂಡನೀಯ. ಮೊದಲು 22ನೇ ಸಮ್ಮೇಳನ ನಡೆಸಿ ಬಳಿಕ 23ನೇ ಸಮ್ಮೇಳನ ನಡೆಸಲು ಯಾರ ಅಭ್ಯಂತರವೂ ಇಲ್ಲ. ಆದರೆ ಹಿರಿಯ ಹೋರಾಟಗಾರರಾದ ತ.ನ.ಪ್ರಭುದೇವ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿ, ಇದೀಗ ಅಪಮಾನಿಸುವ ಕೆಲಸ ಆಗಬಾರದು. ಕೂಡಲೇ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಪ್ರಮಾದವನ್ನು ಸರಿಪಡಿಸಬೇಕು ಎಂದರು.
ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಈಗ ನಡೆಯುತ್ತಿರುವ ಸಮ್ಮೇಳನ ನಿಯಮಬಾಹಿರವಾಗಿದೆ. ಈ ಹಿಂದೆ ನಿಗದಿಯಾಗಿದ್ದ ಸಮ್ಮೇಳನವನ್ನು ಮೊದಲು ಮಾಡಿ, ಬೇಕಾದರೆ ನಂತರ 23ನೇ ಸಮ್ಮೇಳನವನ್ನು ಮಾಡಲಿ. ಈ ಬಗ್ಗೆ ಕಸಾಪ ತಾಲೂಕು ಅಧ್ಯಕ್ಷರು ಪ್ರತಿಕ್ರಿಯಿಸಲಿದ್ದಾರೆ ಎಂದರು.
ಕನ್ನಡ ಸಂಘಟನೆಗಳ ಒಕ್ಕೂಟದ ಚೌಡರಾಜ್ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋರಾಟಗಾರರೊಬ್ಬರನ್ನು ಅಧ್ಯಕ್ಷರಾಗಿ ಮಾಡಲಾಗಿತ್ತು. ಕಳೆದ ಮಾರ್ಚ್‍ನಲ್ಲಿ ನಿಗದಿಯಾಗಿದ್ದ ಸಮ್ಮೇಳನ ಕೊರೋನಾ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಆದರೆ ಈಗ ದಿಢೀರನೇ ಮತ್ತೊಂದು ಸಮ್ಮೇಳನ ನಡೆಸಲಾಗುತ್ತಿದ್ದು, ನಿಯೋಜಿತ ಅಧ್ಯಕ್ಷರಿಗೆ ಅಪಮಾನ ಮಾಡಲು ಹೊರಟಿರುವ ಜಿಲ್ಲಾ ಕಸಾಪ ನಡೆ ಸರಿಯಲ್ಲ. ಇದು ಇಡೀ ಚಳವಳಿಗಾರರಿಗೆ ಮಾಡುವ ಅಪಮಾನ. ಈ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷರೊಂದಿಗೆ ಮಾತನಾಡಿದರೆ ಅವರು ಹಾರಿಕೆ ಉತ್ತರ ನೀಡಿದ್ದಾರೆ ಎಂದರು.
ಮೊದಲು ದೊಡ್ಡಬಳ್ಳಾಪುರದ ಸಮ್ಮೇಳನ ನಡೆಸಬೇಕು. ಪರಿಷತ್ತಿನ ಚುನಾವಣೆ ಇತ್ಯಾದಿ ನೆಪಗಳನ್ನು ಹೇಳಿಕೊಂಡು 23ನೇ ಸಮ್ಮೇಳನ ನಡೆಸಲು ಹೊರಟಿರುವುದು ಅವೈಜ್ಞಾನಿಕವಾಗಿದೆ. ಈ ಬಗ್ಗೆ ಪರಿಷತ್ತಿನ ರಾಜ್ಯಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಪಡಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾ.ಕಸಾಪ ಕಾರ್ಯಾಧ್ಯಕ್ಷ ಶ್ರೀನಿವಾಸ್ ತರಿದಾಳ್, ಕಾರ್ಯದರ್ಶಿ ಜ್ಯೋತಿ ಕುಮಾರ್, ಮಾಜಿ ಅಧ್ಯಕ್ಷ ಎಂ.ಇ.ಖಲೀಲುಲ್ಲಾ ಖಾನ್, ವಿವಿಧ ಸಂಘಟನೆಗಳ ಮುಖಂಡರಾದ ಸಂಜೀವನಾಯಕ್, ಡಿ.ಪಿ.ಆಂಜನೇಯ, ರಾಜಘಟ್ಟರವಿ, ವಿ.ಪರಮೇಶ್, ರಾಜು ಸಣ್ಣಕ್ಕಿ, ಡಿ.ಸಿ.ಚೌಡರಾಜು, ವೆಂಕಟೇಶ್, ಹನುಮಂತರೆಡ್ಡಿ, ಪು.ಮಹೇಶ್, ಮರುಳಾರಾಧ್ಯ, ನಂಜಪ್ಪ, ಕೆ.ಆರ್.ರವಿಕಿರಣ್, ನಾಗರಾಜ್, ಜನಪರ ಚಂದ್ರು, ಎಸ್.ನಟರಾಜ್, ನವೀನ್ ಪ್ರಭುದೇವ್,ಟಿ.ಜಿ.ಮಂಜುನಾಥ್,ಗಂಗರಾಜು, ಡಿ.ಶ್ರೀಕಾಂತ, ಎನ್.ಎಂ.ನಟರಾಜ್ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

