ದೇವನಹಳ್ಳಿ: ಕರೊನಾ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಗಿತಗೊಳಿಸಲಾಯಿತು, ಈಗ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಯೋಜನೆ ಮಾಡಲಾಗಿದ್ದು, ಸಮ್ಮೇಳನ ವಿರೋಧಿ ಕನ್ನಡ ಪರ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಳೆದ ಮಾರ್ಚ್ ತಿಂಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿತ್ತು, ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಹೋರಾಟಗಾರ ತ.ನ.ಪ್ರಭುದೇವ್ ಆಯ್ಕೆಯಾಗಿದ್ದರು, ಆದರೆ ಕರೊನಾ ಹಿನ್ನಲೆ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿರಲಿಲ್ಲ, ಈಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಏಕಾಏಕಿ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಅಯೋಜನೆ ಮಾಡಿದ್ದಾರೆ, ಜಿಲ್ಲಾ ಕಸಾಪ ಪದಾಧಿಕಾರಿಗಳ ಗಮನಕ್ಕೂ ತರದೇ ಏಕಪಕ್ಷೀಯ ತೀರ್ಮಾನದಂತೆ ಚಿ.ಮಾ.ಸುಧಾಕರ್ ವಿಜಯಪುರದಲ್ಲಿ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಯೋಜನೆ ಮಾಡಿದ್ದಾರೆಂಬ ಆಕ್ರೋಶ ಕೇಳಿಬಂದಿತ್ತು.
ಇಂದು ವಿಜಯಪುರದ ಪಟ್ಟಣದ ಗಾಂಧಿಚೌಕದಲ್ಲಿ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಸರ್ವಾಧಿಕಾರಿ ಧೋರಣೆ ವಿರುದ್ಧ ಕನ್ನಡ ಪರ ಸಂಘಟನೆಗಳು ವೇದಿಕೆ ಮುಂದೆಯೇ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಅಧ್ಯಕ್ಷ ಚಿ.ಮಾ.ಸುಧಾಕರ್ ಅವರು 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆಯಾದ 5 ಲಕ್ಷ ಹಣವನ್ನು ದುರುಪಯೋಗ ಮಾಡಿದ್ದಾರೆ, ಅದರ ಲೆಕ್ಕ ಕೊಡದೆ ಭ್ರಷ್ಟಾಚಾರ ಮಾಡಿದ್ದಾರೆ.
ಸಾಹಿತ್ಯ ಪರಿಷತ್ತಿನ ಪ್ರಕಾರ 22 ನೇ ಸಮ್ಮೇಳನದ ಅಧ್ಯಕ್ಷರು 23 ಸಮ್ಮೇಳನದ ಅಧ್ಯಕ್ಷರಿಗೆ ಸಮ್ಮೇಳನದ ದ್ವಜ ಹಸ್ತಾಂತರ ಮಾಡುವುದು ಶಿಷ್ಟಾಚಾರ ಅದನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

