ಬೆಂಗಳೂರು: ಶಾಲೆಗಳ ಪುನರ್ ಆರಂಭದ ಸಂಭ್ರಮದ ನಡುವೆ, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ನಕಾರಾತ್ಮಕ ವರದಿಯ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಗಳ ಪುನರ್ ಆರಂಭಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶಿಕ್ಷಣ ಸಚಿವರ ಕಾರ್ಯಕ್ಕೆ ಪೋಷಕರಿಂದ ಪ್ರಶಂಸೆಗೆ ಕಾರಣವಾಗಿದ್ದಾರೆ. ಆದರೆ ಶಾಲೆ ಆರಂಭವಾದ ಎರಡೇ ದಿನದ ಅಂತರಲ್ಲಿ ಶಿಕ್ಷಕರಿಗೆ ಕರೊನಾ. ಇದು ವಿದ್ಯಾಗಮವಲ್ಲ, ಬದಲಿಗೆ ಇದು “ಕೊರೋನಾಗಮ” ಎಂಬರ್ಥದಲ್ಲಿ ವರದಿ ಪ್ರಸಾರ ಮಾಡುತ್ತಿರುವ ಮಾದ್ಯಮಗಳ ನಡೆಗೆ ಬೇಸರ ವ್ಯಕ್ತಪಡಿಸಿರುವ ಅವರು. ಶಿಕ್ಷಣಕ್ಕೆ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿಯನ್ನು ದಯವಿಟ್ಟು ಉದ್ರೇಕಿಸಬೇಡಿ ಎಂದು ಮಾಧ್ಯಮಗಳ ಹೆಸರೇಳದೆ ಮನವಿ ಮಾಡಿದ್ದಾರೆ.
ಈ ಕುರಿತು ಫೇಸ್ಬುಕ್ ಪುಟದಲ್ಲಿ ಬರೆದು ಕೊಂಡಿದ್ದಾರೆ: ನನ್ನದೊಂದು ಕಳಕಳಿಯ ಮನವಿ. ಕಳೆದ ನಾಲ್ಕು ದಿನಗಳಿಂದ ನಾನು ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದೇನೆ. ನಿನ್ನೆ ಮತ್ತು ಇಂದು ಆನೇಕಲ್ಲು ಮತ್ತು ರಾಮನಗರ, ಮಾಗಡಿ ತಾಲೂಕುಗಳ ಶಾಲಾ-ಕಾಲೇಜುಗಳಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಮಾತನಾಡಿಸಿದ್ದೇನೆ.
ಎಲ್ಲ ಕಡೆ ಶಾಲೆ-ಕಾಲೇಜುಗಳು ಪ್ರಾರಂಭವಾಗಿರುವ ಬಗ್ಗೆ ಒಳ್ಳೆಯ ಬೆಂಬಲ ಹಾಗೂ ಸಂತಸ ಕಂಡುಬರುತ್ತಿದೆ. ಮಕ್ಕಳ ಖುಷಿ, ಸಂಭ್ರಮ..ನೋಡಿಯೇ ಅನುಭವಿಸಬೇಕು. ಆದರೆ ಆಗಲೇ ಜೊತೆಜೊತೆಗೆ ಮತ್ತೆ ಆತಂಕ ಉಂಟುಮಾಡುವ ಸುದ್ದಿಗಳೂ ಪ್ರಕಟವಾಗುತ್ತಿವೆ.
ನಿನ್ನೆಯಿಂದ ತಾನೇ ನಮ್ಮ ಎಸ್.ಎಸ್.ಎಲ್.ಸಿ ಮತ್ತು ಎರಡನೇ ಪಿಯುಸಿ ತರಗತಿಗಳು ಹಾಗೂ ವಿದ್ಯಾ ಗಮ ಕಾರ್ಯಕ್ರಮಗಳು ಪ್ರಾರಂಭವಾಗಿರುವುದು. ಆಗಲೇ ಇಂದು ಶಾಲೆಗಳಲ್ಲಿ ಕೊರೋನಾ ಹರಡುತ್ತಿದೆ ಎಂದು ಅರ್ಥ ಬರುವಂತಹ ಸುದ್ದಿಗಳನ್ನು ಗಮನಿಸಿದೆ. ಇದು ವಿದ್ಯಾಗಮವಲ್ಲ, ಬದಲಿಗೆ ಇದು “ಕೊರೋನಾಗಮ” ಎಂಬ ವರ್ಣರಂಜಿತ ನಾಮಕರಣ ಕೇಳಿ ಮನಸ್ಸಿಗೆ ವೇದನೆಯಾಯಿತು.
ಎಲ್ಲರಲ್ಲೂ, ಶಿಕ್ಷಣಕ್ಕೆ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿಯನ್ನು ದಯವಿಟ್ಟು Sensationalize ಮಾಡಬಾರದೆಂದು ನಾನು ಕಳಕಳಿಯಿಂದ ವಿನಂತಿ ಮಾಡುತ್ತಿದ್ದೇನೆ. ಮಕ್ಕಳ ಬಗ್ಗೆ ತುಸು ಉದಾರತೆ ಮತ್ತು ಕಾಳಜಿ…ಅಗತ್ಯ ಎಂದು ನಮಗೆಲ್ಲಾ ತಿಳಿದೇ ಇದೆ. ಇಂದು ಅವರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ನಾವು ಯಾವುದೇ ವೃತ್ತಿಯಲ್ಲಿದ್ದರೂ ನಾವು ಈ ಸಮಾಜದ ಭಾಗ ಎಂಬುದೂ ಮುಖ್ಯ. ಎಲ್ಲ ಕಡೆ ಮಕ್ಕಳು ತರಗತಿಗೆ ಬಂದು ಶಿಕ್ಷಕರಿಂದ ಪಾಠ ಕೇಳಬೇಕೆಂಬ ತುಡಿತ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳು “ಯಾವುದೇ ಕಾರಣಕ್ಕೂ ತರಗತಿ ಗಳನ್ನು ನಿಲ್ಲಿಸಬೇಡಿ” ಎಂದೂ ಸಹ ಮನವಿ ಮಾಡಿರುವ ಸಂಗತಿಗಳೂ ನಡೆದಿವೆ.
ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಇದು ಅತ್ಯಂತ ಅಗತ್ಯವಾಗಿರುವುದು ಕಂಡುಬರುತ್ತಿದೆ. ನಾವೆಲ್ಲರೂ ಈ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ಇಡೋಣ. ಇವರಿಗೆ ಶಿಕ್ಷಣ ದೊರಕದಿದ್ದರೆ ಇವರ ಬಾಳು ಎತ್ತ ಸಾಗುತ್ತದೋ ನಮಗೆ ತಿಳಿಯದು.
ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ, ಬಾಲ್ಯ ವಿವಾಹ….ಪ್ರಸಂಗಗಳು ಹೆಚ್ಚಾಗುವುದು ಸಮಾಜಕ್ಕೆ ಒಳಿತಲ್ಲ. ನನ್ನ ಈ ಪ್ರಾಮಾಣಿಕ ಅನಿಸಿಕೆ, ಮನವಿಯನ್ನು ದಯವಿಟ್ಟು ಯಾರೂ ತಪ್ಪಾಗಿ ತಿಳಿಯಬೇಡಿ ಎಂದು ಬರೆದುಕೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

