ದೊಡ್ಡಬಳ್ಳಾಪುರ: ಮಹಿಳಾ ಶಿಕ್ಷಣಕ್ಕೆ ವಿರೋಧವಿದ್ದ ಅಂದಿನ ಕಾಲದಲ್ಲೇ ಉನ್ನತ ಶಿಕ್ಷಣ ಪಡೆದ ಸಾವಿತ್ರಿಬಾಯಿ ಪುಲೆ ಅವರು, ಜಾತಿ, ಮತ, ಪಂಥ ಭೇದವಿಲ್ಲದೆ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕೆಂಬ ಹಂಬಲದಿಂದ ಶಿಕ್ಷಣದ ಮಹತ್ವದ ಪ್ರಚುರಪಡಿಸಿದ್ದಾರೆ. ಇದು ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹಾದೇವ್ ತಿಳಿಸಿದರು.
ನಗರದ ಗುರುಭವನದಲ್ಲಿ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ನಡೆದ ಸಾವಿತ್ರಿ ಬಾಯಿ ಪುಲೆ ಅವರ 190ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂಬ ಹಿರಿಮೆಗೆ ಪಾತ್ರರಾದ ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣಕ್ಕೆ ಒತ್ತು ನೀಡಿದ್ದಷ್ಟೇ ಅಲ್ಲದೇ ಅಂದು ಬಾಲ್ಯ ವಿವಾಹ, ದೌರ್ಜನ್ಯಕ್ಕೊಳಗಾದವರ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸಿದ ದಿಟ್ಟ ಮಹಿಳೆಯಾಗಿದ್ದರು. ಸಮಾಜದ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ನಡೆಸಿದರು ಎಂದು ಸ್ಮರಿಸಿದರು.
ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಮಾತನಾಡಿ, ಜ್ಯೋತಿ ಬಾಪುಲೆ ಅವರನ್ನು ವಿವಾಹವಾಗಿದ್ದ ಸಾವಿತ್ರಿಬಾಯಿ ಪುಲೆ ಜೋಡಿ ಸದಾ ಶೋಷಿತರು, ದಮನಿತರ ಪರ ಕೆಲಸ ಮಾಡಿದ್ದಾರೆ. ಪತಿಯಿಂದಲೇ ಶಿಕ್ಷಣದ ಮಹತ್ವ ಅರಿತು ಅಕ್ಷರಾಭ್ಯಾಸ ಮಾಡಿದ ಸಾವಿತ್ರಿ, ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಈ ದಂಪತಿ 18 ಶಾಲೆಗಳನ್ನು ನಡೆಸುವ ಮೂಲಕ ಅಕ್ಷರ ವಂಚಿತ ಮಹಿಳೆಯರು, ಶೋಷಿತರಿಗೆ ವಿದ್ಯೆ ನೀಡುವ ಮಹತ್ವದ ಕಾರ್ಯ ಮಾಡಿದ್ದರು. ಇವರ ಸಾಧನೆ ನಮಗೆಲ್ಲಾ ಸ್ಪೂರ್ತಿದಾಯಕವಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರೂಪಾ,ಮಹಾಲಕ್ಷ್ಮೀ ಭಟ್, ಸಹನಾ, ಉಪಾಧ್ಯಕ್ಷರಾದ ಡಿ.ಎನ್.ಚಿತ್ರಾ,ಪ್ರತಿಮಾ, ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಎಸ್.ಚಂದ್ರಕಲಾ,ಪ್ರಧಾನ ಕಾರ್ಯದರ್ಶಿ ಕೆ.ಎನ್.ತೇಜೋವತಿ, ಖಜಾಂಚಿ ಸುಕನ್ಯಾ,ತಾಲೂಕು ಘಟಕದ ಅಧ್ಯಕ್ಷೆ ನಿರ್ಮಲಾ, ಕಾರ್ಯದರ್ಶಿ ಲಕ್ಷ್ಮೀದೇವಿ, ಖಜಾಂಚಿ ಮಂಗಳ ಕುಮಾರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಜೈಕುಮಾರ್, ಉಪಾಧ್ಯಕ್ಷ ಎ.ವಿ.ಚಂದ್ರು, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಭಾರಿ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ವಸಂತ್ ಗೌಡ ಸಂಘನಾ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

