ಹೌದು…!! ಇತ್ತೀಚಿನ ಭಾರತೀಯ ಮಾಧ್ಯಮ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಹಾಗನ್ನಿಸದೇ ಇರದು.ಹಾಗಂತ ಅದು ವಾಸ್ತವವೂ ಹೌದು ಎನ್ನುವುದು ಸುಳ್ಳಲ್ಲ.
ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಇಂದಿರಾ ಗಾಂಧಿಯವರು ಭಾರತದ ಪ್ರಧಾನಮಂತ್ರಿ ಆಗಿದ್ದಾಗ ಹೇರಿದ ನಿಷೇದಾಜ್ಞೆಯಿಂದ ಹಿಡಿದು ಇವತ್ತಿನ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ನಡೆಯುತ್ತಿರುವ ಕಿಸಾನ್ ಪ್ರತಿಭಟನೆವರೆಗಿನ ಘಟನಾವಳಿಗಳನ್ನು ಕೇಂದ್ರೀಕೃತಗೊಳಿಸಿ ಭಾರತೀಯ ಮಾಧ್ಯಮ ಕ್ಷೇತ್ರವನ್ನು ಅವಲೋಕಿಸಿ ನೋಡಿದರೆ ನಮಗೆ ಅದರಲ್ಲಾಗಿರುವ ಸಕಾರಾತ್ಮಕ ಬದಲಾವಣೆಗಳು ಎದ್ದು ಕಾಣುತ್ತವೆ.
ಏಕೆಂದರೆ, ಇಂದಿರಾಗಾಂಧಿಯವರ ಕಾಲದಲ್ಲಿ ಮಾಧ್ಯಮಗಳು ಅವರ ವಿರುದ್ಧವಾಗಿ ಒಂದಕ್ಷರವನ್ನೂ ಸಹ ಅಚ್ಚೊತ್ತುತ್ತಿರಲಿಲ್ಲ. ಹಾಗೇನಾದರೂ ನಿಷೇದಾಜ್ಞೆಯನ್ನು ವಿರೋಧಿಸಿ ಇಂದಿರಾಗಾಂಧಿಯವರ ವಿರುದ್ಧ ಸುದ್ದಿ ಬಿತ್ತರಿಸಿದ ಮಾಧ್ಯಮಗಳೇನಾದರೂ ಇದ್ದರೆ ಅವು ಜನಸಂಘದ ಮುಖವಾಣಿಗಳೇ ಆಗಿರುತ್ತಿದ್ದವು.
ತದನಂತರದಲ್ಲಿ ಎಂಭತ್ತೊಂದರಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಭಾರತದ ಮೊಟ್ಟಮೊದಲ ದೃಶ್ಯಮಾಧ್ಯಮವಾಗಿ ದೂರದರ್ಶನ ವಾಹಿನಿ ಕಾರ್ಯರೂಪಕ್ಕೆ ಬಂತಾದರೂ, ಅದು ಇಂದಿರಾ ರವರ ಮಟ್ಟಿಗೆ ಅವರ favour ಆಗಿಯೇ ಕಾರ್ಯನಿರ್ವಹಿಸಿದ್ದು ಸುಳ್ಳಲ್ಲ. ಮುಂದೆ ತೊಂಭತ್ತರ ದಶಕದಲ್ಲಿ ತಲೆ ಎತ್ತಿದ ಖಾಸಗಿ ಸುದ್ದಿವಾಹಿನಿಗಳೂ ಸಹ ಇದೇ ಹಾದಿಯಲ್ಲಿ ಹೆಜ್ಜೆಯಿಡತೊಡಗಿದ್ದವು. ಆದರೆ ಇತ್ತೀಚಿನ ಆರೇಳು ವರ್ಷಗಳಿಂದೀಚೆಗೆ “ಕೆಲವು” ಮಾಧ್ಯಮಗಳು ನೇರಾನೇರ ಬಹಿರಂಗ ಚರ್ಚೆಗಳಿಗೆ ಅವಕಾಶ ಕೊಟ್ಟು ಸತ್ಯಾಸತ್ಯತೆಗಳನ್ನು ನೇರವಾಗಿ ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಂತೂ ಸುಳ್ಳಲ್ಲ.
ಈ ಹಿಂದೆ ಮುದ್ರಣ ಮಾಧ್ಯಮಗಳು(ಸರ್ಕಾರ ಹೇಳಿಸುವ) ಏನೇ ಹೇಳಿದರೂ ಅದೇ ಸತ್ಯ ಎಂದು ಮುಗ್ಧ ಜನರು ನಂಬುತ್ತಿದ್ದರು. ಆದರೆ ದೈನಂದಿನ ಜಾಗತಿಕ ಆಗುಹೋಗುಗಳ ಬಗ್ಗೆ ಮನೆಮನೆಯಲ್ಲೂ ನೇರವಾಗಿ ತಿಳಿಯುವಂತಾಗಿದ್ದು ಈ ಕೆಲವು ಕ್ರಾಂತಿಕಾರಿ ಸುದ್ದಿವಾಹಿನಿಗಳಿಂದ ಎನ್ನುವುದು ಸಾರ್ವಕಾಲಿಕ ಬೆತ್ತಲೆ ಸತ್ಯ.
ಇಲ್ಲದಿದ್ದರೆ, 2003 ರಲ್ಲಿ ವಾಜಪೇಯಿ ಅವರಿಗೆ ಆದ ಅನ್ಯಾಯ 2014 ಹಾಗೂ 2019 ರಲ್ಲಿ ಮೋದಿಯವರಿಗೂ ಆಗುತ್ತಿತ್ತು ಎಂಬುದು ಬಹುತೇಕರ ಅಭಿಪ್ರಾಯ ಅದು ಸತ್ಯವೂ ಹೌದು. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲಿಯೂ ಎರಡು ವರ್ಗಗಳ ವೈರುಧ್ಯವಿರುವ ಹಾಗೆ ಮಾಧ್ಯಮ ಕ್ಷೇತ್ರದಲ್ಲೂ ಸಹ ತದ್ವಿರುದ್ಧ ಸಿದ್ಧಾಂತಗಳ ಎರಡು ವರ್ಗಗಳಿವೆ.
ಮಾಧ್ಯಮ ಕ್ಷೇತ್ರ ಈಗಿನ ಕಾಲಮಾನದಲ್ಲಿ ಇಷ್ಟು ಸಬಲವಾಗಿಲ್ಲದಿದ್ದರೆ , ಕೆಲವೊಮ್ಮೆ ಸರ್ಕಾರದ ಶಕ್ತಿ ಕೇಂದ್ರದೊಳಗೇ ಹುದುಗಿ ಹೋಗುತ್ತಿದ್ದ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಹೊರಗೆ ಬರುತ್ತಲೇ ಇರುತ್ತಿರಲಿಲ್ಲ..
ಆಪರೇಷನ್ ಕಮಲಗಳು, ಆಪರೇಷನ್ ಹಸ್ತಗಳು,ರೆಸಾರ್ಟ್ ರಾಜಕಾರಣದ ಕುದುರೆ ವ್ಯಾಪಾರಗಳು, ಆಡಳಿತ ಪಕ್ಷದ ಮೇಲೆ ಭ್ರಷ್ಟಾಚಾರದ ಗೂಬೆ ಕೂರಿಸುವ ವಿಫಲ ಯತ್ನಗಳು, ದುರ್ಬಲ ವಿರೋಧ ಪಕ್ಷಗಳ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡ ಆಡಳಿತ ಪಕ್ಷದ ಸರ್ವಾಧಿಕಾರಿ ನೀತಿಗಳು,
ರೈತರು-ಕಾರ್ಮಿಕರ ಹೆಸರುಗಳಲ್ಲಿ ನಡೆಯುವ ನಕಲಿ ಪ್ರತಿಭಟನೆಗಳು,ಆಡಳಿತ ಪಕ್ಷಗಳ ಸಮರ್ಥ ವಿದೇಶಾಂಗ ನೀತಿಗಳು, ಮೆಚ್ಚಲರ್ಹವಾದ ಸರ್ಕಾರಗಳ ಜನಪರ ಯೋಜನೆಗಳು ಇನ್ನೂ ಅನೇಕಾನೇಕ ಪ್ರಜಾತಂತ್ರದ ಸರಿ-ತಪ್ಪುಗಳು ಜನಸಾಮಾನ್ಯರ ತಿಳುವಳಿಕೆಗೆ ಎಟುಕುತ್ತಿರಲಿಲ್ಲ. ಉದಾಹರಣೆಗೆ ಪ್ರಸ್ತುತ ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೆಲವು ಮಾಧ್ಯಮಗಳು ನಿರಂತರವಾಗಿ ವರದಿ ಮಾಡಿದರೂ ಸಹ ಕೆಲವು ಮಾಧ್ಯಮಗಳು ರೈತರ ಪ್ರತಿಭಟನೆಯ ಸುದ್ದಿ ಬಿತ್ತರಿಸದೇ ಅದರ ನೈಜತೆಯನ್ನೇ ಪ್ರಶ್ನಿಸಿದವು. ಇಲ್ಲಿ ಎರಡೂ ವರ್ಗದ ಮಾಧ್ಯಮಗಳ ಧೋರಣೆಯನ್ನು ಒಪ್ಪಲೂ ಕಾರಣಗಳಿರುವ ಹಾಗೆಯೇ ತಳ್ಳಿಹಾಕಲು ಸಹ ಅಷ್ಟೇ ಕಾರಣಗಳಿವೆ. ಯಾಕೆಂದರೆ, ದೆಹಲಿಯಲ್ಲಿ ನಡೆಯುತ್ತಿರುವುದು ನಿಜವಾಗಿಯೂ ರೈತ ಪ್ರತಿಭಟನೆಯೇ ಆದರೂ ಸಹ ಅದರ ಒಳಹೊಕ್ಕು ನೋಡಿದರೆ ಇದರ ಹಿಂದಿನ ರಾಜಕೀಯ ಪಕ್ಷಗಳ ಹಿಕ್ಮತ್ತುಗಳು ಗೋಚರಿಸುತ್ತವೆ. ಹಾಗಾಗಿ ಸಾಮಾಜಿಕ ಜಾಲತಾಣಗಳು ಇಷ್ಟೊಂದು ಚುರುಕಾಗಿರುವ ಕಾಲಘಟ್ಟದಲ್ಲಿ ಮಾಧ್ಯಮಗಳೇ ಆಗಲಿ, ರಾಜಕೀಯ ಪಕ್ಷಗಳೇ ಆಗಲಿ, ಆಳುವ ಸರ್ಕಾರಗಳೇ ಆಗಲಿ ಜನರನ್ನು ಯಾಮಾರಿಸುವುದು ಅಸಾಧ್ಯದ ಮಾತೇ ಸರಿ.
ಏನೇ ಆದರೂ ‘ಕೆಲವು’ ಸುದ್ದಿ ಮಾಧ್ಯಮಗಳ ನೇರ ನಿಷ್ಠುರ ಕಾರ್ಯವೈಖರಿಯ ಕಾರಣದಿಂದ ದಿಲ್ಲಿಯ ವಿಚಾರಗಳು ಇಲ್ಲಿಯ ಹಳ್ಳಿಯ ಶ್ರೀಸಾಮಾನ್ಯನ ಬುದ್ಧಿಮತ್ತೆವರೆಗೆ ತಲುಪುತ್ತಿವೆ ಎಂದಾದರೆ ಅಂತಹ ಮಾಧ್ಯಮ ಕ್ಷೇತ್ರದ ಸಂಪರ್ಕ ಸೇತು ಕಾರ್ಯವನ್ನು ಮೆಚ್ಚಲೇಬೇಕೆಂಬ ಅಭಿಪ್ರಾಯವನ್ನು ಮಂಡಿಸುತ್ತಾ….ಇಂತಿ ನಿಮ್ಮವ ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

