ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಹಾಗೂ ದುರಸ್ತಿಯಾಗದೇ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿರುವುದರಿಂದ ದುರಸ್ತಿ ಹಾಗೂ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪಡೆಯಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ನಡೆದ “ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ಸರ್ವ ಸದಸ್ಯರ ಸಾಮಾನ್ಯ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿರುವ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಂಬಂಧಿಸಿದ ಸಂಸ್ಥೆಗಳು ದುರಸ್ತಿ ಕಾರ್ಯ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಸಭೆಯಲ್ಲಿ ಪ್ರಸ್ತಾಪಿಸಿದಾಗ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ, ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೂಲಕ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ತಿಳಿಸಿದರು. ಘಟಕಗಳ ನಿರ್ವಹಣೆ ಜೊತೆಗೆ ಸಾಕಷ್ಟು ನೀರು ಪೋಲಾಗುತ್ತಿದ್ದು ನೀರಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರಲ್ಲದೆ ಇಲ್ಲವಾದಲ್ಲಿ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿಜೇರಿಯನ್ ಪ್ರಕರಣಗಳು ಹೆಚ್ಚಾಗುತ್ತಿದೆ, ಜಿಲ್ಲೆಯ ಹೆರಿಗೆ ಆಸ್ಪತ್ರೆಗಳಲ್ಲಿ ಹಣದ ಪಡೆಯುವುದಕ್ಕಾಗಿಯೇ ಸಿಜೇರಿಯನ್ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಅವರು ಮಾತನಾಡಿ ಗರ್ಭಿಣಿ ಹಾಗೂ ಮಗುವಿನ ಆರೋಗ್ಯ ಸ್ಥಿತಿಯ ಅನುಸಾರವಾಗಿ ಸಾಮಾನ್ಯ ಹೆರಿಗೆ ಅಥವಾ ಸಿಜೇರಿಯನ್ ಎಂದು ನಿರ್ಧರಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಹಣದ ಆಮಿಷಕ್ಕಾಗಿ ಸಿಜೇರಿಯನ್ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿಲ್ಲ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷರು ಮಾತನಾಡಿ ರೋಗಿಗಳು ಹೊರ ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಸೂಚಿಸಿದರಲ್ಲದೆ ದೇವನಹಳ್ಳಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ಇದುವರೆಗೂ ಯಾವುದೇ ಸಭೆಗಳನ್ನು ನಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಸಭೆಯ ನಡೆಸಲು ತಿಳಿಸಿದರು ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ ನೆಲಮಂಗಲದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರಸ್ತುತ ಇರುವ ವಸತಿ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ನೆಲಸಮಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮರಳುಕುಂಟೆ ಗ್ರಾಮದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ದೇವನಹಳ್ಳಿ ತಾಲ್ಲೂಕಿನ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು ಹಾಗೂ ಪ್ರಸ್ತುತವಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪ್ರಸಕ್ತ ವರ್ಷ ಬಡ್ತಿ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ರವಿಕುಮಾರ್ ಡಿಡಿಪಿಐ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 664 ಕೆರೆಗಳಿದ್ದು, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ತಾಲ್ಲೂಕಿನ ಒಟ್ಟು 32 ಕೆರೆಗಳಿದ್ದು, ಹೂಳನ್ನು ಎತ್ತಲಾಗಿದೆ ಎಂದರಲ್ಲದೆ, ಕೆರೆಗಳ ಸಮಿತಿ ರಚನೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚನೆ ಮಾಡುವಂತೆ ಸಿಇಓ ಅವರು ತಿಳಿಸಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಒಂದು ಮೀನು ಮಾರಾಟ ಕೇಂದ್ರ ತೆರೆಯುವಂತೆ ಸದಸ್ಯರು ಒತ್ತಾಯಿಸಿದರು. ಮೀನುಗಾರಿಕೆ ಇಲಾಖೆಯ ಸಹಾಯಧನದಡಿಯಲ್ಲಿ ಮೀನುಗಳನ್ನು ಪಡೆದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಒಂದು ಕೆರೆಯನ್ನು ಆಯ್ಕೆ ಮಾಡಿಕೊಂಡು ಮೀನು ಸಾಕಾಣಿಕೆ ಮಾಡುವ ಮೂಲಕ ಗ್ರಾಮ ಪಂಚಾಯಿತಿಯು ಆದಾಯ ಪಡೆಯುವಂತಾಗಬೇಕು ಎಂದು ಅಧ್ಯಕ್ಷರು ತಿಳಿಸಿದರಲ್ಲದೆ, ಕ್ಯಾಟ್‌ಫಿಶ್ ಸಾಕಾಣಿಕೆ ಪ್ರಸ್ತುತ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲೂ ನಿಯಂತ್ರಣ ತಪ್ಪದಂತೆ ಕ್ರಮ ವಹಿಸಲು ತಿಳಿಸಿದರು.
ಜಿಲ್ಲೆಯಲ್ಲಿ ಕ್ರೀಡಾಶಾಲೆಯನ್ನು ನಿರ್ಮಿಸುವಂತೆ ಜಿ.ಪಂ.ಸದಸ್ಯರು ಕೇಳಿದಾಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಾತನಾಡಿ ದೇವನಹಳ್ಳಿ ಕ್ರೀಡಾಂಗಣದಲ್ಲಿ ಕ್ರೀಡಾ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ನಿರ್ದೇಶನದನ್ವಯ ಡಿಡಿಪಿಐ ಅವರು ಕ್ರೀಡಾ ಸಾಮಗ್ರಿಗಳ ಅವಶ್ಯವಿರುವ ಸರ್ಕಾರಿ ಶಾಲೆಗಳ ಪಟ್ಟಿ ನೀಡಿದರೆ ಕ್ರೀಡಾ ಸಾಮಗ್ರಿಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಹೊಸಕೋಟೆ ತಾಲ್ಲೂಕಿನ ಕೆರೆಗಳಲ್ಲಿ ಇರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಅರ್ಧಕ್ಕೆ ನಿಂತಿದ್ದು, ಶೀಘ್ರವೇ ಮರಗಳನ್ನು ತೆರವುಗೊಳಿಸಬೇಕು ಹಾಗೂ ಚೆಕ್‌ಡ್ಯಾಂ ಗಳನ್ನು ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಜಿಲ್ಲೆಯಲ್ಲಿ ಹನಿ ನೀರಾವರಿ ಘಟಕಗಳ ಅಳವಡಿಕೆಗೆ 3000 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದ್ದು, ರೈತರಿಗೆ ಮಾಹಿತಿ ತಲುಪಲು ಜಿಲ್ಲಾದ್ಯಂತ ಪ್ರಚಾರ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ಜಿಲ್ಲೆಯ ತಾಲೂಕುಗಳಲ್ಲಿ ತಲಾ 5 ಫಲಾನುಭವಿಗಳಿಗೆ ತಳ್ಳುವ ಗಾಡಿ ಕೊಂಡುಕೊಳ್ಳಲು15 ಸಾವಿರ ರೂಪಾಯಿ ಧನಸಹಾಯ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ರೂ.1.51 ಕೋಟಿ ವೆಚ್ಚದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ವಸತಿ ಗೃಹವನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಮಾಡಲು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಅನುಮೋದನೆ ನೀಡಿದರು.
ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಜಿಲ್ಲೆಯಲ್ಲಿ 500 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲು ಅನುದಾನ ಬಳಸಲು ಸಭೆ ಅನುಮೋದನೆ ನೀಡಿತು ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಳಿದಿರುವ ರೂ.98 ಲಕ್ಷ ಹಣವನ್ನು ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬಳಸಲು ಸಿಇಓ ಅವರು ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಉಳಿತಾಯವಾದ ರೂ.1.23 ಕೋಟಿ ಹಣದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಗಣಿ ಮತ್ತು ಕ್ರಷರ್ ಗಳ ವಾಹನಗಳು ತೆರಳುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದರಿಂದ ದ್ವಿಚಕ್ರವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯರು ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಪಂ ಸಿಇಒ ಅವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್-19 ಲಸಿಕೆ ವಿತರಣೆ ಕುರಿತು ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಜಿಲ್ಲೆ, ತಾಲ್ಲೂಕು, ಹೋಬಳಿ ಹಂತದಲ್ಲಿ ತಲುಪಲು ವ್ಯವಸ್ಥೆ ಮಾಡಲಾಗಿದೆ. 10-15 ದಿನಗಳಲ್ಲಿ ಔಷಧಿ ಸಿಗುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ 9317 ಮಂದಿಗೆ ಔಷಧಿ ವಿತರಣೆ ಮಾಡಲಾಗುವುದು ಮೊದಲ ಡೋಸ್ ಪಡೆದ ನಂತರ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು ಒಟ್ಟು 18634 ಡೋಸ್ ಅಗತ್ಯವಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇ.1.7 ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಂಜುಳಾದೇವಿ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು, ಜಿಲ್ಲಾ ಪಂಚಾಯತಿ ಸದಸ್ಯರುಗಳು, ತಾಲ್ಲೂಕು ಪಂಚಾಯತಿ ಅಧ್ಯಕ್ಷರುಗಳು, ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ಬಿ.ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ ಬಿ.ರಮೇಶರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

