ದೊಡ್ಡಬಳ್ಳಾಪುರ: ನಂದಿನಿ ಉತ್ಪನ್ನಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಗಳ ಕಾರ್ಯನಿರ್ವಾಹಕರು, ಸಂಘದ ಆಡಳಿತ ಮಂಡಗಳಿಗು ವ್ಯಾಪಕ ಪ್ರಚಾರ ಕೈಗೊಂಡು ವ್ಯಾಪಾರ ವಹಿವಾಟು ಹೆಚ್ಚು ಮಾಡಲು ಶ್ರಮಿಸಬೇಕು ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಹೇಳಿದರು.
ಅವರು ನಗರದ ಹಾಲು ಶೀಥಲ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯನಿರ್ವಾಹಕ ಹಾಗೂ ಸಂಘದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು.
ಸಹಕಾರಿ ತತ್ವದ ಅಡಿಯಲ್ಲಿ ನಡೆಯುತ್ತಿರುವ ಹಾಲು ಒಕ್ಕೂಟಗಳು ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿ ಹಾಗೆಯೇ ಖಾಸಗಿ ಹಾಲು ಮಾರಾಟ ಕಂಪನಿಗಳ ಸ್ಪರ್ಧೆಯನ್ನು ಎದುರಿಸಿ ಮುನ್ನಡೆಯಲು ಎಲ್ಲರ ಸಹಕಾರ ಅಗತ್ಯ. ನಂದಿನಿ ಉತ್ಪನ್ನಗಳು ಹೆಚ್ಚು ಮಾರಾಟವಾದರೆ ಅದರ ಲಾಭ ರೈತರಿಗು ತಲುಪಲಿದೆ. ಈಗ ಒಕ್ಕೂಟದಲ್ಲಿ 40 ಸಾವಿರ ಟನ್ ಹಾಲಿನ ಪುಡಿ ದಾಸ್ತಾನು ಉಳಿದಿದೆ. ನಂದಿನಿ ಹಾಲು ಹಾಗೂ ತುಪ್ಪವನ್ನು ಖಾಸಗಿ ಕಂಪನಿಗಳು ಖರೀದಿಸಿ ಮಾರಾಟ ಮಾಡುತ್ತಿವೆ. ಇದರ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.
ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ನಮ್ಮ ತಾಲ್ಲೂಕು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಗುಣಮಟ್ಟದ ಹಾಲು ಉತ್ಪಾದನೆ ಎಲ್ಲರ ಗುರಿಯಾಗಬೇಕು. ಸ್ಪರ್ಧಾತ್ಮಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗುಣಮಟ್ಟಕ್ಕೆ ಪ್ರಥಮ ಆದ್ಯತೆ. ಹೀಗಾಗಿ ಹಾಲು ಉತ್ಪಾದಕ ಸಂಘದ ಸಿಬ್ಬಂದಿ ಸೇರಿದಂತೆ ಆಡಳಿತ ಮಂಡಳಿಯವರು ಒಟ್ಟಾಗಿ ಶ್ರಮವಹಿಸಬೇಕು ಎಂದರು.
ಹಾಲು ಉತ್ಪಾದಕರ ಸಂಘದಲ್ಲಿನ ಸಿಬ್ಬಂದಿಯ ನೆರವಿಗಾಗಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲಾಗುವುದು. ಸಂಕಷ್ಟದ ಸಂದರ್ಭದಲ್ಲಿ ಸಿಬ್ಬಂದಿಯ ನೆರವಿಗೆ ಈ ನಿಧಿಯಿಂದ ನೆರವು ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರ ಉಪವ್ಯವಸ್ಥಾಪಕ ಡಾ.ಗೋಪಾಲಕೃಷ್ಣ, ಡಾ.ಎಲ್.ವಿ.ನಾಗರಾಜ್, ಕಾಂಗ್ರೆಸ್ ಮುಖಂಡ ರಾಜ್ಕುಮಾರ್ ಇದ್ದರು. ಇದೇ ಸಂದರ್ಭದಲ್ಲಿ ನಂದಿ ದಿನಚರಿ ಹಾಗೂ ಕ್ಯಾಲೆಂಡ್ ಬಿಡುಗಡೆ ಮಾಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

