ಬೆಂ.ಗ್ರಾ.ಜಿಲ್ಲೆ: ಮತದಾರರ ಕರಡು ಪಟ್ಟಿ ಪರಿಷ್ಕರಣೆಯು ಕ್ರಮಬದ್ಧ ಹಾಗೂ ಪಾರದರ್ಶಕವಾಗಿರಲು, ಮತದಾರರ ಪಟ್ಟಿಗೆ ಹೆಸರು ನೋಂದಣಿ/ಸೇರ್ಪಡೆ ಮಾಡುವಾಗ ಹಾಗೂ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವಾಗ/ತೆಗೆದು ಹಾಕುವಾಗ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಕಾಲ ಮಿಷನ್‌ನ ಅಪರ ನಿರ್ದೇಶಕರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಡಾ.ಬಿ.ಆರ್.ಮಮತಾ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸುವಿಕೆ ಹಾಗೂ ಸಂಬಂಧಿತ ಕಾರ್ಯಗಳ ಕುರಿತ ಎರಡನೇ ಹಂತದ ಸಭೆಯ” ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
18 ವರ್ಷ ಪೂರ್ಣಗೊಂಡು, ಮತದಾರರ ಪಟ್ಟಿಗೆ ಸೇರ್ಪಡೆಗೆ ಸಲ್ಲಿಕೆಯಾಗಿರುವ ಯುವ ಮತದಾರರ ಆನ್‍ಲೈನ್ ಮತ್ತು ಆಫ್‍ಲೈನ್ ಅರ್ಜಿಗಳ ನಮೂನೆ, 6, 7, 8 ಮತ್ತು 8ಎ ಅರ್ಜಿಗಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಜಿಲ್ಲೆಯ ಮಾಹಿತಿ ಪಡೆದರು.
ಮತದಾರರ ಪಟ್ಟಿ ದೋಷರಹಿತವಾಗಿದ್ದರೆ ಮಾತ್ರ ಯಾವುದೇ ಚುನಾವಣೆಯು ಸುಸೂತ್ರವಾಗಿ ನಡೆಯಲು ಸಾಧ್ಯ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಚುನಾವಣೆಯ ಸಂದರ್ಭದಲ್ಲಿ ಯಾವುದೇ ದೂರುಗಳು ಬಾರದಿರುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಕೆಲವೆಡೆ ಮತದಾರರ ಗುರುತಿನ ಚೀಟಿ ಲಭ್ಯವಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದಿರುವ ಪ್ರಕರಣಗಳು ಕಂಡುಬಂದಿದೆ. ಇಂತಹ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಎಂದರಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಮರಣ ಹೊಂದಿರುವವರ ಮರಣ ಪ್ರಮಾಣಪತ್ರ ಮತ್ತು ವಿವಾಹ ಆಮಂತ್ರಣ ಪತ್ರಿಕೆಯನ್ನು ದಾಖಲೆಯಲ್ಲಿ ಲಗತ್ತಿಸಿರುವ ಮಾಹಿತಿ ಪರಿಶೀಲಿಸಿ ಎಂದರು.
ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಿದ ಅಂಕಿ ಅಂಶಗಳು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಅಂಕಿ ಅಂಶಗಳನ್ನು ನಿಖರವಾಗಿ ದಾಖಲಿಸಿ ಸಲ್ಲಿಸಬೇಕು ಎಂದು ತಹಶೀಲ್ದಾರರುಗಳಿಗೆ ಸೂಚಿಸಿದರು. ಪುರಸ್ಕೃತ ಹಾಗೂ ತಿರಸ್ಕೃತ ಅರ್ಜಿಗಳ ಎಸ್.ಎಮ್.ಎಸ್ ಸೇವೆ ಮುಂದುವರಿಸಬೇಕು, ಮತದಾರರ ಪಟ್ಟಿಯಲ್ಲಿ ಫೋಟೋ ಗುಣಮಟ್ಟ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪರಿಷ್ಕರಣೆ ವೇಳೆ ಬಿಎಲ್‌ಓಗಳು ಮತದಾರರ ಮನೆಗೆ ಭೇಟಿ ನೀಡಿ ಹೆಸರು, ಹುಟ್ಟಿದ ದಿನಾಂಕ, ವಯಸ್ಸಿನ ವಿವರಗಳನ್ನು ನಿಖರವಾಗಿ ಕಲೆಹಾಕಿ ದಾಖಲಿಸಬೇಕು ಎಂದು ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿರುವುದನ್ನು ತಿಳಿಸಿದರಲ್ಲದೆ, ಜಿಲ್ಲೆಯ ಮತದಾರರು ಚುನಾವಣೆ, ಮತದಾನದ ಮಹತ್ವ ಕುರಿತು ಅರಿವನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಮತದಾನ, ಮತದಾರರು, ಪ್ರಜಾಪ್ರಭುತ್ವ, ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾದವರ ಸ್ಪರ್ಧೆ ನಡೆಯಬೇಕಿದೆ ಎಂದರು.
ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮಿಂಚಿನ ನೋಂದಣಿ ಅಭಿಯಾನ ಹಾಗೂ ವ್ಯಾಪಕ ಪ್ರಚಾರದ ಮೂಲಕ ನೋಂದಣಿಗೆ ಕ್ರಮವಹಿಸಲಾಗಿದೆ ಎಂದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ.ಜೆ ಸೇರಿದಂತೆ ಜಿಲ್ಲೆಯ ತಹಶೀಲ್ದಾರ್‌ಗಳು ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಡಾ.ಬಿ.ಆರ್.ಮಮತಾ ಅವರು ದೇವನಹಳ್ಳಿ ತಾಲ್ಲೂಕಿನ, ಕುಂದಾಣ ಹೋಬಳಿಯ ವಿಶ್ವನಾಥಪುರ ಗ್ರಾಮದ ಕೆಲವು ಮನೆಗಳಿಗೆ ಯಾದೃಚ್ಛಿಕವಾಗಿ(Random) ಭೇಟಿ ನೀಡಿ, ಮತದಾರರೊಂದಿಗೆ ಸಮಾಲೋಚನೆ ನಡೆಸಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಇನ್ನಿತರ ಮಾಹಿತಿ ಪರಿಶೀಲಿಸಿದರು.
ಸಭೆ ಆರಂಭಕ್ಕೂ ಮುನ್ನ ಹೃದಯಘಾತದಿಂದ ಜ.06 ರಂದು ನಿಧನರಾದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕಾಜಾ ಹುಸೇನ್ ಮುಧೋಳ್ ಅವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

