ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲೆಯ ಗ್ರಾಮೀಣ ಯುವಕರಿಗೆ ಜೀವನೋಪಾಯ ಭದ್ರತೆ ಪ್ರಾಯೋಜನೆಯಡಿಯಲ್ಲಿ ಆರು ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಾಗಾರವನ್ನು ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ಎರೆಹುಳುಗಳ ಪಾತ್ರ, ಯುವಕರಿಗೆ ಕೃಷಿಯಲ್ಲಿರುವ ಹಲವಾರು ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಯುವಕರು ಕೃಷಿ ಕಡೆಗೆ ಗಮನ ತೋರುತ್ತಿರುವುದು ಆಶಾದಾಯಕವಾಗಿದ್ದು, ಯುವಕರು ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ಪಡೆಯುವುದರಿಂದ ನಗರ ಪ್ರದೇಶಗಳಿಗೆ ಯುವಕರು ಉದ್ಯೋಗ ಹುಡುಕಿಕೊಂಡು ಹೋಗುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಭಾರತ ಸರ್ಕಾರದ ಕೃಷಿ ತಂತ್ರಜ್ಞಾನ ಮಾಹಿತಿ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಕೇಂದ್ರದ ನೋಡಲ್ ಅಧಿಕಾರಿ ಡಾ.ತಿಮ್ಮಪ್ಪ ತರಬೇತಿಯಲ್ಲಿ ಭಾಗವಹಿಸಿ ಯುವಕರಿಗೆ ಕೇಂದ್ರ ಸರ್ಕಾರದಿಂದ ಲಭ್ಯವಿರುವ ವಿವಿಧ ಉದ್ಯಮಗಳ ಬಗ್ಗೆ ಮಾಹಿತಿ ನೀಡಿ, ಪ್ರಾಯೋಜನೆ ವತಿಯಿಂದ ಮುಂದಿನ ವರ್ಷ ದೊರೆಯಲಿರುವ ವಿವಿಧ ಉದ್ಯಮಶೀಲ ಕೌಶಲ್ಯ ತರಬೇತಿಗಳ ಕುರಿತು ತಿಳಿಸಿಕೊಟ್ಟರು.
ತರಬೇತಿ ಸಂಯೋಜಕ ಡಾ.ಪಿ.ವೀರನಾಗಪ್ಪ, ಎರೆ ಹುಳು ಗೊಬ್ಬರ ತಯಾರಿಕೆಯ ಬಗ್ಗೆ ಉಪನ್ಯಾಸ ನೀಡಿ ಎರೆಗೊಬ್ಬರದಿಂದ ಮಣ್ಣಿನ ಫಲವತ್ತತೆಯ ಮೇಲಾಗುವ ಪರಿಣಾಮಗಳು, ಎರೆಗೊಬ್ಬರ ಬಳಕೆ ಮತ್ತು ಎರೆಹುಳು ಗೊಬ್ಬರವನ್ನು ಒಂದು ಉದ್ದಿಮೆಯಾಗಿ ಸ್ಥಾಪಿಸುವುದರ ಬಗ್ಗೆ ಪ್ರಾಯೋಗಿಕ ತರಗತಿಗಳನ್ನು ಹಮ್ಮಿಕೊಂಡಿದ್ದರು.
ರೇಷ್ಮೆ ಕೃಷಿ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ ಡಾ. ಡಿ.ವಿ.ನವೀನ್ ಮತ್ತು ಡಾ. ಸಿ.ಎನ್.ನಳಿನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿದಾರರಿಗೆ ಎರೆಹುಳು ಗೊಬ್ಬರ ತಯಾರಿಕೆ ವಿಧಾನಗಳು, ತ್ಯಾಜ್ಯ ಪದಾರ್ಥಗಳ ಸಿದ್ಧತೆ ಮತ್ತು ಎರೆಹುಳುಗಳ ಜೀವನ ಚಕ್ರದ ಬಗ್ಗೆ ತರಬೇತಿ ನೀಡಿದರು.
ಕೇಂದ್ರದ ವಿಜ್ಞಾನಿಗಳಾದ ಡಾ.ಜೆ.ವೆಂಕಟೇ ಗೌಡ ಮತ್ತು ಡಾ.ಬಿ.ಮಂಜುನಾಥ್ ಸಾವಯವ ಗೊಬ್ಬರ ತಯಾರಿಕೆ ವಿಧಾನಗಳು ಮತ್ತು ಎರೆಹುಳುಗಳ ಸಂರಕ್ಷಣೆಯ ಕುರಿತು ವಿವರಿಸಿದರು.
ಡಾ.ಆರ್.ಎನ್.ಲಕ್ಷ್ಮೀಪತಿ, ಸಾವಯವ ಸಂಶೋಧನಾ ಕೇಂದ್ರ, ಬೆಂಗಳೂರು ಇವರು ಎರೆಹುಳು ಗೊಬ್ಬರ ತಯಾರಿಸುವ ವಿಧಾನಗಳು, ಸೂಕ್ಷ್ಮ ಜೀವಿಗಳ ಜೊತೆ ಎರೆಹುಳುವಿನ ಸಂಬಂಧದ ಕುರಿತು ಉಪನ್ಯಾಸ ನೀಡಿದರು.ಎನ್.ಜಗದೀಶ್ ಮತ್ತು ಶ್ರೀ ಶಿವಪ್ರಸಾದ್ ರವರು ಎರೆಗೊಬ್ಬರದ ಬಳಕೆ ಹಾಗೂ ಗೊಬ್ಬರದ ವಿಶ್ಲೇಷಣೆಯ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಭಾಗವಹಿಸಿದ್ದ 40 ಜನ ಯುವಕರಿಗೆ ಎರೆಗೊಬ್ಬರ ತಯಾರಿಕೆ ತೊಟ್ಟಿ, ಜರಡಿ, ವಾಟರ್ ಕ್ಯಾನ್ ಮತ್ತು 1 ಕಿ.ಗ್ರಾಂ. ಎರೆಹುಳು ವಿತರಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಲೈಕ್ ಮಾಡಿ ಹಾಗೂ ಟ್ವಿಟರ್ ಫಾಲೋ ಮಾಡಿ, ಟೆಲಿಗ್ರಾಂ ಗುಂಪನ್ನು ಸೇರಿ.

