ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿ ನೀರನ್ನು ಶುದ್ಧೀಕರಿಸದೆ ಕೆರೆಗೆ ಹರಿದು ಬಿಟ್ಟಿರುವುದರಿಂದ ಬರುತ್ತಿರುವ ದುರ್ವಾಸನೆಯಿಂದಾಗಿ ಗ್ರಾಮದಲ್ಲಿ ವಾಸಮಾಡುವುದೇ ದುಸ್ಥರವಾಗಿದೆ ಎಂದು ಚಿಕ್ಕತುಮಕೂರು ಗ್ರಾಮಸ್ಥರು ಅಳಲು ತೋಡಿಕೊಂಡರು.
ರಾಜ್ಯ ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಅವರೊಂದಿಗೆ ಕೆರೆ ಅಭಿವೃದ್ಧಿ ಕುರಿತಂತೆ ಭಾನುವಾರ ಕೆರೆ ವೀಕ್ಷಣೆಯ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ಆದಿತ್ಯನಾಗೇಶ್, ಸಂದೇಶ್, ಬಚ್ಚಹಳ್ಳಿಸತೀಶ್, ವೀರಾಪುರ ಶಿವಕುಮಾರ್, ನಗರದಿಂದ ಹರಿದು ಬರುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸದೆ ಕೆರೆಗೆ ಹರಿದು ಬಿಡದಂತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಕೆರೆ ಅಂಗಳದಲ್ಲಿ ನೀರು ಶುದ್ದೀಕರಿಸುವ ವಿದ್ಯುತ್ ಮೋಟಾರ್ ಕೆಟ್ಟು ಹೋಗಿ ಎರಡು ತಿಂಗಳು ಕಳೆದಿದ್ದರು ದುರಸ್ಥಿ ಮಾಡಿಸಿಲ್ಲ. ಕೈಗಾರಿಕಾ ಪ್ರದೇಶದಲ್ಲಿನ ಹೆಚ್ಚು ಜನ ಸಂಖ್ಯೆ ಹೊಂದಿರುವ ಬಾಶೆಟ್ಟಿಹಳ್ಳಿ ಗ್ರಾಮದಲ್ಲಿ ಒಳಚರಂಡಿ ನಿರ್ಮಿಸಲಾಗಿದೆ. ಅದರೆ ಶುದ್ಧೀಕರಣ ಘಟಕವನ್ನು ಮಾತ್ರ ಹತ್ತು ವರ್ಷಗಳಿಂದಲು ನಿರ್ಮಿಸದೆ ಕೆರೆಗೆ ನೇರವಾಗಿ ಹರಿದುಬಿಡಲಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿಗಳನ್ನು ಸಲ್ಲಿಸಿದ್ದರು ಯಾವುದೇ ಉಪಯೋಗವಾಗಿಲ್ಲ. ಒಂದು ವಾರದ ಒಳಗಾಗಿ ಕೊಳಚೆ ನೀರು ಶುದ್ಧೀಕರಣದ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ನಗರಸಭೆ ಹಾಗೂ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕೆರೆಯಲ್ಲಿನ ಕೊಳಚೆ ನೀರನ್ನು ಟ್ಯಾಂಕರ್ಗಳ ಮೂಲಕ ತುಂಬಿಕೊಂಡು ಹೋಗಿ ಹರಿದು ಬಿಡಲಾಗುವುದು. ಹಾಗೆಯೇ ಶುದ್ಧೀಕರಣಗೊಳ್ಳದೆ ಕೆರೆಗೆ ಹರಿದು ಬರುತ್ತಿರುವ ಕೊಳಚೆ ನೀರಿನ ಕಾಲುವೆಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದ ರಾಜ್ಯ ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ, ಬೆಂಗಳೂರಿನ ಕೊಳಚೆ ನೀರನ್ನು ಈಗಾಗಲೇ ಶುದ್ಧೀಕರಿಸಿ ಬಯಲು ಸಿಮೆಯ ತಾಲ್ಲೂಕುಗಳಿಗೆ ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ಸಹಕಾರಿಯಾಗಿದೆ. ಇದೇ ಮಾದರಿಯಲ್ಲಿ ಇಲ್ಲಿನ ನೀರನ್ನು ಉತ್ತಮವಾಗಿ ಶುದ್ಧೀಕರಿಸಿ ಕೆರೆಗೆ ಹರಿದು ಬಿಟ್ಟರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಲೈಕ್ ಮಾಡಿ ಹಾಗೂ ಟ್ವಿಟರ್ ಫಾಲೋ ಮಾಡಿ, ಟೆಲಿಗ್ರಾಂ ಗುಂಪನ್ನು ಸೇರಿ.

