
ಬೆಂ.ಗ್ರಾ.ಜಿಲ್ಲೆ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಡೆಯುವ ವಿದ್ಯಾಗಮ ಕಾರ್ಯಕ್ರಮದಲ್ಲಿ ಕೋವಿಡ್-19 ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಯಲ್ಲಿ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಕಾಲು ಕೈಗಳನ್ನು ತೊಳೆಯುವುದು ಸೇರಿದಂತೆ ಕೋವಿಡ್-19 ನಿಯಮಗಳನ್ನು ಪಾಲಿಸುವುದು ಕಡ್ಡಾಯವೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಜ್ಯದಲ್ಲಿ ಶಾಲೆಗಳ ಪುನರ್ ಆರಂಭ ಮತ್ತು ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಆರೋಗ್ಯ ಅತಿ ಮುಖ್ಯವಾಗಿದ್ದು, ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಶೌಚಾಲಯ, ಕುಡಿಯುವ ನೀರು, ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಳ ಶುಚಿಯಾಗಿಡಬೇಕು ಎಂದರಲ್ಲದೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ಸೇವೆ ಒದಗಿಸಬೇಕು ಎಂದರು.
ಕೋವಿಡ್-19 ಮಾರ್ಗಸೂಚಿ ಅನ್ಚಯ ಹಾಸ್ಟೆಲ್ ಗಳನ್ನು ಸ್ಯಾನಿಟೈಸ್ ಮಾಡಿರಬೇಕು, ಕೋವಿಡ್ ರೋಗಿಗಳಿಗೆ ಬಳಸಿದ ಬೆಡ್ ಗಳನ್ನು ತೆರವುಗೊಳಿಸಿ, ಹೊಸ ಬೆಡ್ ಗಳನ್ನು ಅಳವಡಿಸಬೇಕು, ಹಾಸ್ಟೆಲ್ ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಗೈರು ಹಾಜರಾದ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ದಾಖಲಾಗುವಂತೆ ಮನವೊಲಿಸಬೇಕು ಎಂದರು.
ಕೋವಿಡ್-19 ಸಂದರ್ಭದಲ್ಲೂ ವಿದ್ಯಾರ್ಥಿಗಳು ಶಾಲೆಗೆ ಮತ್ತು ಹಾಸ್ಟೆಲ್ ಗೆ ದಾಖಲಾಗುವ ಪ್ರಮಾಣ ಹೆಚ್ಚಿಸಬೇಕು. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಬಿಸಿಯೂಟದ ಯೋಜನೆಯಡಿ ಒಂದು ಮಗುವಿಗೆ ಎಷ್ಟು ಪ್ರಮಾಣದಲ್ಲಿ ಅಕ್ಕಿ, ಗೋಧಿ, ತೊಗರಿ ಬೇಳೆ ಕೊಡಲಾಗುತ್ತದೆ ಎಂಬ ಮಾಹಿತಿಯನ್ನು ಪಡೆದರು, ಅಲ್ಲದೆ ಆಹಾರ ಪದಾರ್ಥ ಅಂದರೆ ಅಕ್ಕಿ, ಬೇಳೆಕಾಳುಗಳನ್ನ ಸ್ವಚ್ಚವಾಗಿ ಶೇಖರಣೆ ಮಾಡಬೇಕು ಎಂದರು.
ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮ ಆರಂಭವಾಗದ ಕಾರಣ ಒಬ್ಬ ವಿದ್ಯಾರ್ಥಿಗೆ 4.5 ಕೆ.ಜಿ ಅಕ್ಕಿ, 800ಗ್ರಾಂ ಗೋಧಿ ನೀಡಲಾಗುತ್ತದೆ. ಮಕ್ಕಳಿಗೆ ಆಹಾರ ಪದಾರ್ಥಗಳನ್ನು ಜೂನ್, ಜುಲೈ ತಿಂಗಳಲ್ಲಿ ಮನೆಗೆ ಸರಬರಾಜು ಮಾಡುತ್ತಿದ್ದೆವು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು ಹಾಗೂ ಹತ್ತನೇ ತರಗತಿಯ ಪಠ್ಯ ಕ್ರಮವನ್ನು ಶೇ. ಮೂವತ್ತರಷ್ಟು ಅಧಿಕೃತವಾಗಿ ಕಡಿತವಾಗಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯಕ್, ತಾಲ್ಲೂಕು ಪುರಸಭಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಚ್.ಗಂಗಮಾರೇಗೌಡ, ಡಯಟ್ ಉಪ ನಿರ್ದೇಶಕರು (ಅಭಿವೃದ್ಧಿ) ಅನಿತಾ.ವಿ. ನಾಜರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪುಪ್ಪಲತಾ.ಜಿ.ರಾಯರ್, ದೊಡ್ಡಬಳ್ಳಾಪುರ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್, ತಾಲ್ಲೂಕಿನ ಬಿ.ಇ.ಓ ಗಳು, ಅಕ್ಷರ ದಾಸೋಹ ಅಧಿಕಾರಿಗಳು, ಶಿಕ್ಷಣ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

