
ಬೆಂ.ಗ್ರಾ.ಜಿಲ್ಲೆ: ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷವಾಗಿ ಆಚರಿಸುವ ಮೂಲಕ ಮತದಾರರಲ್ಲಿ ಚುನಾವಣೆ ಹಾಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕೆಂದು ಸಕಾಲ ಮಿಷನ್‌ನ ಅಪರ ನಿರ್ದೇಶಕರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಡಾ.ಬಿ.ಆರ್.ಮಮತಾ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಭಾಂಗಣದಲ್ಲಿ ನಡೆದ “ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸುವಿಕೆ ಹಾಗೂ ಸಂಬಂಧಿತ ಕಾರ್ಯಗಳ ಕುರಿತ ಮೂರನೇ ಹಂತದ ಸಭೆಯ” ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಈಗಾಗಲೇ ಅಂತಿಮ ಹಂತ ತಲುಪಿದ್ದು, ಮುದ್ರಣಕ್ಕೆ ಹೋಗುವ ಮುನ್ನ ಬಿಎಲ್‌ಓಗಳು ಮತ್ತೊಮ್ಮೆ ಮತದಾರರ ಪಟ್ಟಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಹೊಸದಾಗಿ ಹೆಸರುಗಳನ್ನು ಸೇರಿಸಿರುವ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳಿಂದ ವಿತರಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರಲ್ಲದೆ, ಬಿಎಲ್‌ಓಗಳು ಮತದಾರರ ಪಟ್ಟಿಯ ಪ್ರತಿ ಪುಟಗಳನ್ನು ಪರಿಶೀಲಿಸಬೇಕು ಹಾಗೂ ಇತ್ತೀಚೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕುಗಳ ಕೈಗಾರಿಕಾ ಪ್ರದೇಶದ ಗ್ರಾಮಗಳಲ್ಲಿ ವಾಸಿಸುತ್ತಿರುವ ಮತದಾರರ ವಿಳಾಸ, ಲಿಂಗ, ಭಾವಚಿತ್ರ ಸರಿಯಾಗಿ ಇದೆಯೇ ಎಂಬುದನ್ನು ಪುನಃ ಪರಿಶೀಲಿಸಲು ಬಿಎಲ್‌ಒಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

