
ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ, ಕಾರ್ಮಿಕ ಹಕ್ಕುಗಳ ಉಳಿವಿಗಾಗಿ, ಆಹಾರ ಭದ್ರತೆ, ಉದ್ಯೋಗದ ಉಳಿವಿಗಾಗಿ, ಪೆಟ್ರೋಲ್,ಡೀಸೆಲ್, ಅಡಿಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರೈತ, ಕಾರ್ಮಿಕ, ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ತಾಲೂಕಿನಾದ್ಯಂತ ಜನ ಜಾಗೃತಿ ಜಾಥಾದ ಸಮಾರೋಪದ ಅಂಗವಾಗಿ ನಗರದಲ್ಲಿ ಜನ ಜಾಗೃತಿ ಜಾಥಾದ ಸಮಾರೋಪ ಹಾಗೂ ರೈತ ಮಹಿಳೆಯರ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆಯಲ್ಲಿ ದೆಹಲಿ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಎರಡು ತಿಂಗಳಿನಿಂದ ದಹಲಿಯಲ್ಲಿ ಲಕ್ಷಾಂತರ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಬೆಚ್ಚಿದೆ. ಆದರೆ ಕೃಷಿ ಕಾಯ್ದೆಗಳ ಪರವಾಗಿ ಆರ್ಎಸ್ಎಸ್ ಹಾಗೂ ಬಿಜೆಪಿ ಮುಖಂಡರ ಬಾಯಲ್ಲಿ ಮಾತನಾಡಿಸುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಜನವರಿ 26ರಂದು ದೆಹಲಿಗೆ ತೆರಳುವುದು ನಿಶ್ಚಿತವಾಗಿದ್ದು, ಗಣರಾಜ್ಯೋತ್ಸವದಂದು ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದ ನಂತರ ಬೆಂಗಳೂರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರು ರಾಷ್ಟ್ರಧ್ವಜ, ಹಸಿರು ಧ್ವಜಗಳನ್ನು ಹಿಡಿದು, ಟ್ರ್ಯಾಕ್ಟರ್ಗಳನ್ನು ಚಲಾಯಿಸಿಕೊಂಡು ಜಾಥಾ ನಡೆಸಲಿದ್ದಾರೆ. ಹೋರಾಟವನ್ನು ಹತ್ತಿಕ್ಕುವುದು ಸರ್ಕಾರದ ಉದ್ದೇಶವಾಗಿದ್ದು, ಆದರೆ ನಮ್ಮ ಹಕ್ಕನ್ನು ನಾವು ಚಲಾಯಿಸಲಿದ್ದೇವೆ ಎಂದರು.
ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ಪರಿಣಿತರಾಗಿದ್ದು, ಚುನಾವಣೆಗೆ ಮುನ್ನ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಕುರಿತಾಗಿ ಸ್ವಾಮಿನಾಥನ್ ವರದಿ ಬಗ್ಗೆ ಚಕಾರವಿಲ್ಲ. ಕೃಷಿ ಕಾಯ್ದೆ ತಿದ್ದುಪಡಿ ಮಾಡುವುದಾದರೆ, ಸ್ವಾಮಿ ನಾಥನ್ ವರದಿಯಂತೆ ಪ್ರತಿ ವರ್ಷ ಕನಿಷ್ಟ ಬೆಂಬಲ ಬೆಲೆ ಪರಿಷ್ಕರಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.
ಕೇಂದ್ರದ ಎಪಿಎಂಸಿ ಕಾಯ್ದೆ, ವಿವಿಧ ಕೃಷಿ ಮಸೂದೆಗಳು ಹಾಗೂ ರಾಜ್ಯದಲ್ಲಿ ಜಾರಿ ಮಾಡಿರುವ ಭೂ ಸುಧಾರಣಾ ಕಾಯ್ದೆಯಿಂದ ಹಣವಂತರು ಹಾಗೂ ಕಾರ್ಪೋರೇಟ್ಗಳಿಗೆ ಅನುಕೂಲವಾಗಿ ರೈತರಿಗೆ ಅನ್ಯಾಯವಾಗುವ ಈ ಕಾಯ್ದೆಗಳು ಯಾವುದೇ ಕಾರಣಕ್ಕೂ ಜಾರಿಯಾಗದಂತೆ ತೀವ್ರ ಹೋರಾಟ ಮಾಡಬೇಕಿದೆ. ರೈತರ ತಮ್ಮ ಮಾರಾಟ ವ್ಯವಸ್ಥೆಯನ್ನು ಸುಗಮವಾಗಿ ರೂಪಿಸಿಕೊಂಡಿರುವ ಎಪಿಎಂಸಿ ವ್ಯವಸ್ಥೆಯು ಹೊಸ ಎಪಿಎಂಸಿ ಕಾಯ್ದೆಯಿಂದ ರೈತರ ಕೈತಪ್ಪಿ ಬಂಡವಾಳ ಶಾಹಿಗಳ ಹಿಡತಕ್ಕೆ ಹೋಗುತ್ತದೆ ಅಂತೆಯೇ ಭೂಸುಧಾರಣಾ ಕಾಯ್ದೆ ಸಹ ರೈತರಿಂದ ಉಳ್ಳವರ ಪಾಲಾಗುತ್ತಿದ್ದು, ಈಗಾಗಲೇ ರೈತರ ಉತ್ಪನ್ನಗಳನ್ನು ಕಂಪನಿಗಳು ಖರೀದಿಸಿ ಹಿಡಿತ ಸಾಧಿಸಲು ಹೊರಟಿವೆ. ವಿದ್ಯುತ್ ಖಾಸಗೀಕರಣ, ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣದಿಂದ ಮುಂದೆ ಜನರ ಬದುಕು ದುಸ್ತರವಾಗಲಿದೆ. ಈಗ ಜಾರಿಗೆ ತರುತ್ತಿರುವ ಗೋಹತ್ಯೆ ನಿಷೇಧ ಕಾನೂನು ವಿರೋಸಿ ಜಾನುವಾರುಗಳನ್ನು ಹೊಡೆದುಕೊಂಡು ವಿಧಾನಸೌಧಕ್ಕೆ ತೆರಳಿ ಪ್ರತಿಭಟಿಸಬೇಕಿದೆ ಎಂದರು.
ಸಿಪಿಐಎಂ ಮುಖಂಡ ಕೆ.ಎನ್.ಉಮೇಶ್ ಮಾತನಾಡಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಇತ್ತೀಚೆಗೆ ಜಾರಿಗೆ ತರುತ್ತಿರುವ ಎಲ್ಲಾ ಕಾಯ್ದೆಗಳು ಜನ ವಿರೋಧಿಯಾಗಿವೆ. ಇದಲ್ಲದೇ 2016ರಲ್ಲಿ ಜಾರಿಗೆ ತಂದಿರುವ ಪಾಪರಿಕೆ ಹಾಗೂ ದಿವಾಳಿತನ ಸಂಹಿತೆಯಿಂದ ಸಾವಿರಾರು ಕೋಟಿ ರೂ ಸಾಲ ಮಾಡಿ ಕೈಚೆಲ್ಲಿರುವ ಉದ್ಯಮಿಗಳಿಗೆ ಸಹಕಾರಿಯಾಗಲಿದೆ.ಕಾರ್ಮಿಕ ಸಂಹಿತೆಗಳಾದ ವೇನತ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ, ಉದ್ಯೋಗ ಸುರಕ್ಷತೆ ಮೊದಲಾದ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ವಿರೋಧವಾಗಿದ್ದು, ಸರ್ಕಾರಗಳು ಹಠಕ್ಕೆ ಬಿದ್ದು, ಕಾಯ್ದೆಗಳನ್ನು ಜಾರಿ ಮಾಡುತ್ತಿವೆ. ಕೇಂದ್ರ ಸರ್ಕಾರಕ್ಕೆ ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಸಭೆಯಲ್ಲಿ ರೈತ, ದಲಿತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಆರ್.ಚಂದ್ರತೇಜಸ್ವಿ, ಪ್ರಸನ್ನ,ಸತೀಶ್, ಸುಲೋಚನಮ್ಮ ವೆಮಕಟರೆಡ್ಡಿ, ಸಿದ್ದಲಿಂಗಯ್ಯ,ಸಿ.ಎಚ್.ರಾಮಕೃಷ್ಣ, ಹನುಮೇಗೌಡ, ಡಾ.ರಕ್ಷಿತ್, ಸಂಜೀವ್ ನಾಯಕ್,ಡಿ.ಪಿ.ಆಂಜನೇಯ, ರಾಜು ಸಣ್ಣಕ್ಕಿ, ಪುರುಷೋತ್ತಮ್,ಪಿ.ಎ.ವೆಂಕಟೇಶ್, ರೇಣುಕಾರಾದ್ಯ, ರುದ್ರಾರಾದ್ಯ, ನಳಿನಾಕ್ಷಿ, ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಿ ನಮ್ಮೊಂದಿಗೆ ಜೊತೆಯಾಗಿ.

