
ದಾವಣಗೆರೆ: ಕರೊನಾ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸೊರಗಿದೆ ನಿಜ. ಒಟ್ಟಾರೆ 4 ಸಾವಿರ ಕೋಟಿ ಹಾನಿಗೊಳಗಾಗಿದೆ. ಹೀಗಂದ ಮಾತ್ರಕ್ಕೆ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ. ನೌಕರರ ಬದುಕನ್ನು ಬೀದಿಗೆ ಬರಲು ನಾನು ಬಿಡುವುದಿಲ್ಲವೆಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸಂ.ಸವದಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗ, ದಾವಣಗೆರೆ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕ.ರಾ.ರ.ಸಾ ನಿಗಮದ ಕೇಂದ್ರ ಬಸ್ ನಿಲ್ದಾಣ ದಾವಣಗೆರೆ ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೆಎಸ್ಆರ್ಟಿಸಿ ನೌಕರರು ಇತ್ತೀಚೆಗೆ ನಡೆಸಿದ ಹೋರಾಟ ತಪ್ಪಲ್ಲ. ಆದರೆ ಸಮಯ, ಸಂದರ್ಭ ಗಮನದಲ್ಲಿಟ್ಟುಕೊಂಡು ಮಾಡಬೇಕಿತ್ತು. ಪ್ರತಿಭಟನೆಗೂ ಮುನ್ನ ನೋಟಿಸ್ ನೀಡಿ ಮಾಡಬೇಕು. ದಿಢೀರನೆ ಪ್ರತಿಭಟನೆಗೆ ನಿಲ್ಲುವುದು ಸರಿಯಲ್ಲ. ನೋಟಿಸ್ ನೀಡಿದ್ದರೆ ನಾನೇ ತಕ್ಷಣ ತಮ್ಮನ್ನು ಕರೆಸಿ ಸ್ಪಂದಿಸುತ್ತಿದ್ದೆ. ಕರೊನಾ ಹಿನ್ನೆಲೆಯಲ್ಲಿ ಸಹ ತಾವು ಕೇಳದಿದ್ದರೂ ನಾನು ಮುಖ್ಯಮಂತ್ರಿಗಳ ಮನವೊಲಿಸಿ ನಾಲ್ಕು ತಿಂಗಳ ವೇತನಕ್ಕೆ ವ್ಯವಸ್ಥೆ ಮಾಡಿದ್ದೆ. ತಾವು ತಮ್ಮ ಬೇಡಿಕೆಗಳಿಗೆ ಹೋರಾಟ ಮಾಡುವುದು ನಿಮ್ಮ ಹಕ್ಕಾದರೆ ನಾವು ಅದನ್ನು ಪೂರೈಸುವುದು ನಮ್ಮ ಕರ್ತವ್ಯ. ಆದರೆ ನಮ್ಮ ಚಾಲರು, ನಿರ್ವಾಹಕರೇ ತಮ್ಮ ಬಾಳಿಗೆ ಬೆಳಕಾದ ಬಸ್ಸಿಗೆ ಕಲ್ಲು ತೂರಿದ್ದು ಮನಸ್ಸಿಗೆ ಬೇಸರ ತಂದಿತು ಎಂದು ಬೇಸರ ವ್ಯಕ್ತಪಡಿಸಿದರು.
ಕಾಲ ಹೀಗೆಯೇ ಇರುವುದಿಲ್ಲ. ಅಭಿವೃದಿಯೆಡೆ ನಿಗಮ ಸಾಗಲಿದೆ. ಹಿಂದೆಲ್ಲ ಕೆಲವೇ ಕಂಪೆನಿಗಳ ವಾಹನಗಳು ನಮ್ಮಲ್ಲಿದ್ದವು. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಅಂತರಾಷ್ಟ್ರೀಯ ವಾಹನಗಳು ಬರಲಿವೆ. ಎಲೆಕ್ಟ್ರಾನಿಕ್ ಬಸ್ಗಳನ್ನು ನಿಗಮದ ಮೂಲಕ ಓಡಿಸಲು ಒಪ್ಪಂದ ಮಾಡಲಾಗಿದೆ. ನಮ್ಮದೇ ಚಾಲಕರು/ನಿರ್ವಾಹಕರು ಈ ಬಸ್ಗಳನ್ನು ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಶೀಘ್ರದಲ್ಲಿ 4 ರಿಂದ 6 ಕಡೆ ತರಬೇತಿ ಕೇಂದ್ರಗಳನ್ನು ಆರಂಭಿಸಿ ತರಬೇತಿ ನೀಡಲಾಗುವುದು.
ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಬಸ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. 1 ಬಸ್ ವೆಚ್ಚ ರೂ.2 ಕೋಟಿ ಇದ್ದು ಕೇಂದ್ರ ಸರ್ಕಾರ ರೂ.55 ಲಕ್ಷ ಸಬ್ಸಿಡಿ ನೀಡಲಿದೆ. ಸಬ್ಸಿಡಿಯಲ್ಲಿ ಖರೀದಿಸಿದ ಏಜೆನ್ಸಿ ಬಸ್ ಇಲಾಖೆಗೆ ನೀಡುವ ಒಪ್ಪಂದ ಮಾಡಿಕೊಳ್ಳಲಾಗುವುದು. ತರಬೇತಿ ಹೊಂದಿದ ನಮ್ಮ ಸಿಬ್ಬಂದಿಗಳು ಇದನ್ನು ನಿರ್ವಹಿಸುವರು ಎಂದರು.
ಉತ್ತಮ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ನೀಡುವಂತೆ, ಪ್ರತಿ ಲೀಟರ್ಗೆ ಹೆಚ್ಚು ಕಿ.ಮೀ ಓಡಿಸುವ ಚಾಲಕರಿಗೆ 11 ಗ್ರಾಂ ಬಂಗಾರದ ಪದಕ ನೀಡುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಚಾಲಕರು ಉತ್ತಮ ಸೇವೆ ಸಲ್ಲಿಸಬೇಕು. ಸಿಬ್ಬಂದಿಗಳ 10 ಬೇಡಿಕೆಗಳ ಪೈಕಿ 9 ನ್ನು ಪೂರೈಸಲಾಗಿದೆ. ಯಾರೂ ಆತಂತಕ್ಕೆ ಈಡಾಗದೇ ಕರ್ತವ್ಯ ನಿರ್ವಹಿಸಬೇಕು ಎಂದರು.
ಇಲಾಖೆ ಹಾನಿ ಆಗಲು ಕಾರಣ ರಾಜಕೀಯ ಇಚ್ಚಾಶಕ್ತಿ ಕೊರತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗಬಹುದೆಂಬ ಆತಂಕ. ಡೀಸೆಲ್ ದರ, ಟೈರ್ ದರ, ಸಂಬಳ ಎಲ್ಲವೂ ಹೆಚ್ಚಾಗುತ್ತಿದೆ. ಆದರೆ ಆದಾಯ ಹೆಚ್ಚಿಸಲು ಆಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆದಾಯವನ್ನು ಸರಿದೂಗಿಸುವ ಬಗ್ಗೆ ನನ್ನದೇ ಪರಿಕಲ್ಪನೆಯಿದ್ದು ಈ ಪ್ರಕಾರ 4 ನಿಗಮಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದರು.
ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್ ಶಂಕುಸ್ಥಾಪನೆಯನ್ನು ನೆರೆವೇರಿಸಿ ಮಾತನಾಡಿ, ಜೋರು ಮಳೆ ಬಂದರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿ ಅವ್ಯವಸ್ಥೆ ಆಗುತ್ತಿತ್ತು. ಈಗ ಸ್ಮಾರ್ಟ್ ಸಿಟಿ ಯೋಜನೆಯ ರೂ.90 ಕೋಟಿ ಹಾಗೂ ಸಾರಿಗೆ ಇಲಾಖೆಯ ರೂ.30 ಕೋಟಿ ಒಟ್ಟು ರೂ.120 ಕೋಟಿ ಮೊತ್ತದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಬಸ್ ನಿಲ್ದಾಣದಲ್ಲಿ ವ್ಯವಸ್ಥಿತ ಪಾರ್ಕಿಂಗ್, ಶಾಪಿಂಗ್ ಕಾಂಪ್ಲೆಕ್ಸ್, ಸಿನೆಮಾ ಥಿಯೇಟರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಇರಲಿವೆ. 2 ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರರು ಅಚ್ಚುಕಟ್ಟಾಗಿ, ಶಾಶ್ವತವಾಗಿ ಉಳಿಯುವಂತೆ ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಿಕೊಡಬೇಕು ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅನೇಕ ಕೆಲಸಗಳು ನಡೆಯುತ್ತಿವೆ. ಹೈಟೆಕ್ ರೈಲ್ವೇ ನಿಲ್ದಾಣ, ರೂ.35 ಕೋಟಿ ವೆಚ್ಚದಲ್ಲಿ ಸಿಆರ್ಸಿ, ಉತ್ತಮ ರಸ್ತೆಗಳು, ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ. ಹಾಗೂ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಜೊತೆಗೆ ರೂ.5 ಕೋಟಿ ವೆಚ್ಚದಲ್ಲಿ ಎಸಿ ಕಚೇರಿ ನಿರ್ಮಿಸಲು ಒಪ್ಪಿಗೆ ದೊರೆತಿದೆ.ದಾವಣಗೆರೆಯನ್ನು ಅತ್ಯುತ್ತಮ ಜಿಲ್ಲೆಯನ್ನಾಗಿಸುವುದು ನನ್ನ ಕನಸಾಗಿದ್ದು ಇದನ್ನು ಸಾಕಾರಗೊಳಿಸಲು ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳು ಸಹಕರಿಸುತ್ತಿದ್ದು, ಮುಂದೆಯೂ ಹೀಗೆಯೇ ಕೈಹಿಡಿಯುತ್ತಾರೆಂಬ ಭರವಸೆ ಇದೆ ಎಂದರು.
ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಇಂದು ಚಾಲನೆ ನೀಡಿದ್ದು ಅಲ್ಲಿ ನಿರಪಯುಕ್ತ ಬಸ್ನಲ್ಲಿ ಮಹಿಳೆಯರಿಗೆ ಮೊಬೈಲ್ ಶೌಚಾಲಯ ನಿರ್ಮಿಸಿರುವುದು ಅತ್ಯುತ್ತಮವಾಗಿದ್ದು ಈ ಕೆಲಸ ಶ್ಲಾಘನೀಯವಾಗಿದೆ ಎಂದ ಅವರು ಉತ್ತಮ ಸೇವೆಗಾಗಿ ಬೆಳ್ಳಿ ಪದಕ ಪಡೆದವರ ಜವಾಬ್ದಾರಿ ಇನ್ನೂ ಹೆಚ್ಚಿದ್ದು, ಎಲ್ಲರೂ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಬೇಕೆಂದರು.
ನಗರಾಭಿವೃದ್ದಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಬಸವರಾಜ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿ ಮಾತನಾಡಿ, ಇಂದು ಸಂತೋಷದ ದಿನವಾಗಿದ್ದು, ಇಡೀ ರಾಜ್ಯದಲ್ಲೇ ದಾವಣಗೆರೆಯ ಬಸ್ ನಿಲ್ದಾಣ ಮಾದರಿ ಆಗಬೇಕು. ಆ ರೀತಿಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶ್ರದ್ದೆಯಿಂದ ನಿಗದಿತ ಸಮಯದೊಳಗೆ ಕೆಲಸ ಮಾಡಬೇಕೆಂದು ಸೂಚಿಸಿದ ಅವರು ಸಂಸದರ ಪ್ರಯತ್ನದಿಂದ ಸ್ಮಾರ್ಟ್ಸಿಟಿ ಯೋಜನೆಯಡಿ ಅತ್ಯಾಧುನಿಕ ಬಸ್ ನಿಲ್ದಾಣ ಕಾರ್ಯ ಆರಂಭವಾಗಿದ್ದು, ಅವರು ಪ್ರತಿ ತಾಲ್ಲೂಕುಗಳ ಬಗ್ಗೆ ಗಮನ ಹರಿಸಿ ಮಾಡಿಸುತ್ತಿದ್ದಾರೆ ಎಂದರು.ಬಸ್ ಚಾಲಕರ ಕೈಯಲ್ಲಿ ಎಲ್ಲ ಪ್ರಯಾಣಿಕರ ಪ್ರಾಣ ಇರುತ್ತದೆ. ಆದ ಕಾರಣ ನಿರ್ಲಕ್ಷ್ಯ ವಹಿಸದೇ, ಜಾಗ್ರತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದ ಅವರು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಸಂಸ್ಥೆಯನ್ನು ಅಭಿವೃದ್ದಿಯತ್ತ ಕೊಂಡಯ್ಯಲು ಸಾಧ್ಯ ಎಂದರು
ಕ.ರಾ.ರ.ಸಾ ನಿಗಮದ ಅಧ್ಯಕ್ಷರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾತನಾಡಿ, ಜಿಲ್ಲೆಯ ಸಂಸದರಾದ ಜಿ.ಎಂ ಸಿದ್ದೇಶ್ವರವರ ಪ್ರಯತ್ನ ಮತ್ತು ಒತ್ತಾಸೆಯಂತೆ ಇಂದು ನಗರದಲ್ಲಿ ರೂ.120 ಕೋಟಿಯಲ್ಲಿ ಸುಸಜ್ಜಿತ ಬಸ್ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ.
ಸಂಸ್ಥೆಯಲ್ಲಿ ಡೀಸೆಲ್ಗೂ ಹಣ ಇಲ್ಲದಂತಹ ಕಷ್ಟ ಕಾಲದಲ್ಲಿ, ಬಸ್ಗಳು ಓಡಾಡಲು ಕಷ್ಟಕರವಾಗಿದ್ದ ಸಂದರ್ಭದಲ್ಲಿ ಸಾರಿಗೆ ಸಚಿವರು ಸರ್ಕಾರದ ಮನವೊಲಿಸಿ 1780 ಕೋಟಿ ಅನುದಾನವನ್ನು ತಂದರು. ಆದರೆ ಕಳೆದ ಮಾಹೆಯ 11 ಮತ್ತು 12 ನೇ ತಾರೀಕಿನಂದು ಇಲಾಖೆಯ ನೌಕರರು ಏಕಾಏಕಿ ಪ್ರತಿಭಟನೆ ಆರಂಭಿಸಿದಿರಿ. ಸುಮಾರು 1.30 ಲಕ್ಷ ನೌಕರರಿರುವ ಒಂದು ತಿಂಗಳಿಗೆ ವೇತನ ನೀಡಲು ಸುಮಾರು 300 ಕೋಟಿ ಅವಶ್ಯಕತೆ ಇರುವ ಸಂಸ್ಥೆಯ ಕಷ್ಟಗಳೆಲ್ಲ ತಿಳಿದಿದ್ದ ನೀವು ಸರ್ಕಾರಕ್ಕೆ ಬೆಲೆ ಕೊಡುವ ಕೆಲಸ ಮಾಡಬೇಕಿತ್ತು ಎಂದರು.
ಇಲಾಖೆ ನಷ್ಟದಲ್ಲಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಒಂದೇ ಕಾರಣಕ್ಕೆ ಬಸ್ಗಳನ್ನು ಓಡಿಸುತ್ತಿದ್ದೇವೆ. 30 ಸಾವಿರ ಬಸ್ ಗಳ ಪೈಕಿ 20 ಸಾವಿರ ಬಸ್ಗಳನ್ನು ಓಡಿಸುತ್ತಿದ್ದು 10 ಸಾವಿರ ಬಸ್ಗಳು ಗ್ಯಾರೇಜ್ನಲ್ಲಿ ನಿಂತಿವೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಪ್ರತಿಭಟನೆ ನಡೆಸಿದಿರಿ. ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಂಸ್ಥೆಯನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುಬಹುದೆಂದು ಸೂಚ್ಯವಾಗಿ ಹೇಳುತ್ತಿದ್ದೇನೆ ಎಂದ ಅವರು ನೌಕರರೆಲ್ಲರೂ ಇದು ನಮಗೋಸ್ಕರ ಇರುವ ಸಂಸ್ಥೆ ಎಂಬ ಮನೋಭಾವ ಹೊಂದಬೇಕೆಂದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಹೈಟೆಕ್ ಬಸ್ನಿಲ್ದಾಣವಾಗುತ್ತಿರುವುದು ಸಂತಸದ ವಿಚಾರ. ಆದರೆ ಬಸ್ಸ್ಟ್ಯಾಂಡ್ ಕೆಡವಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ಷಿಪ್ರವಾಗಿ ಕೆಲಸ ಮುಗಿಸಬೇಕೆಂದರು.
ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ಒಟ್ಟು 9 ಎಕರೆ ಜಾಗದಲ್ಲಿ ಸ್ಮಾರ್ಟ್ಸಿಟಿಯ ರೂ.90 ಕೋಟಿ ಮತ್ತು ಸಾರಿಗೆ ಇಲಾಖೆಯ ರೂ.30 ಕೋಟಿ ಸೇರಿ ಒಟ್ಟು ರೂ.120 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೀಲಿನಕ್ಷೆ ತಯಾರಿಸಲಾಗಿದೆ. ನೆಲಮಹಡಿ ಸೇರಿ ಒಟ್ಟು ಆರು ಮಹಡಿಗಳಲ್ಲಿ ನಿಲ್ದಾಣದ ನಿರ್ಮಾಣ ಆಗಲಿದೆ. ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್, ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಗಳು, ಭದ್ರತಾ ಕೊಠಡಿ, ಸೋಲಾರ್ ಸೌಲಭ್ಯ, ವಾಹನಗಳ ಪಾರ್ಕಿಂಗ್, ಎಲಿವೇಟರ್ಗಳು, ಎಸ್ಕಲೇಟರ್ಗಳು, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಸಹ ಮಾಡಲಾಗುವುದು ಎಂದರು.
ಬೆಳ್ಳಿ ಪದಕ ಪ್ರದಾನ :ದಾವಣಗೆರೆ ವಿಭಾಗದಲ್ಲಿ 2018 ಮತ್ತು 2019 ನೇ ಸಾಲಿನಲ್ಲಿ ಸತತವಾಗಿ 5 ವರ್ಷ ಅಪಘಾತ/ಅಪರಾಧರಹಿತವಾಗಿ ಹಾಗೂ ಪ್ರತಿ ವರ್ಷ ಕನಿಷ್ಟ 200 ದಿನ ಹಾಜರಾತಿ ಹೊಂದಿ ಸೇವೆ ಸಲ್ಲಿಸಿದ ಒಟ್ಟು 27 ಚಾಲಕರು ಮತ್ತು ಚಾಲಕ/ನಿರ್ವಾಹಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.
ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಸಾರಿಗೆ ಮಂಡಳಿ ನಿರ್ದೇಶಕರುಗಳಾದ ರಾಜು, ಆರುಂಡಿ ನಾಗರಾಜ್, ರುದ್ರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಎಸ್ಪಿ ರಾಜೀವ್ ಮುಖ್ಯ ಇಂಜಿನಿಯರ್ ಜಗದೀಶ್ ಚಂದ್ರ ಇತರೆ ಅಧಿಕಾರಿಗಳು ಇದ್ದರು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

