
ಬೆಂ.ಗ್ರಾ.ಜಿಲ್ಲೆ: ಮಕ್ಕಳಿಗೆ ಬಾಲ್ಯದಲ್ಲಿ ಅತಿ ಶಿಕ್ಷಣ ಮುಖ್ಯವಾಗಿದ್ದು, ಶಿಕ್ಷಣ ಕೊಡಿಸಬೇಕೆ ಹೊರತು ಮಕ್ಕಳಿಂದ ದುಡಿಮೆ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಘಟನೆಗಳು ಕಂಡುಬಂದಲ್ಲಿ ದುಡಿಸಿಕೊಳ್ಳುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ನಡೆದ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ‘ಬಾಲ್ಯಾವಸ್ಥೆ ಮತ್ತು ಕಿಶೋರ ವ್ಯವಸ್ಥೆ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಮತ್ತು ತಿದ್ದುಪಡಿ ಕಾಯ್ದೆ 2016ರ ಬಗ್ಗೆ ಜನ ಜಾಗೃತಿ ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದ ಕೆಲಸಗಳಲ್ಲಿ ನೇಮಿಸಿಕೊಳ್ಳುವಂತಿಲ್ಲ ಹಾಗೂ 18 ವರ್ಷದ ಒಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರ ವ್ಯವಸ್ಥೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986ರ ಅಡಿಯಲ್ಲಿ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ 2 ವರ್ಷದವರೆಗೂ ಕಾರಾಗೃಹ ಶಿಕ್ಷೆ ಅಥವಾ 20 ಸಾವಿರಕ್ಕಿಂತ ಕಡಿಮೆ ಇಲ್ಲದೆ ಹಾಗೂ 50 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ ಹಾಗೂ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಪ್ರಕಾರ 18 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಂಡಲ್ಲಿ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸುವ ಅವಕಾಶ ಇದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ ಅವರು ಮಾತನಾಡಿ, ಸಂಬಂಧಿಸಿದ ಇಲಾಖೆಗಳು ಈಗಾಗಲೇ ನೆಲಮಂಗಲ ಸೇರಿದಂತೆ ವಿವಿಧ ನಗರ ಪ್ರದೇಶದಲ್ಲಿ ದಿಢೀರ್ ದಾಳಿ ನಡೆಸಿ ಹಲವಾರು ಮಕ್ಕಳನ್ನು ರಕ್ಷಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದರಲ್ಲದೆ, ಬಾಲ ಕಾರ್ಮಿಕರು ಕಂಡುಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ.ಜಿ.ರಾಯರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಭವ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬಾರಾವ್, ಕಾರ್ಮಿಕ ನಿರೀಕ್ಷಕಿ ಅಂಬಿಕಾ, ಸಿಬ್ಬಂದಿಗಳಾದ ಕರಿಯಪ್ಪ, ಕಾವ್ಯ, ಮುರಳಿ, ಮಂಜುನಾಥ್ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

