
ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಸಾಂಕೇತಿಕವಾಗಿ ನೆರವೇರಿತು.
ದೇವಾಲಯದ ಆವರಣದಲ್ಲಿ ಮಂಗಳ ವಾದ್ಯಗಳು ಮತ್ತು ಅರ್ಚಕರ ವೇದಘೋಷಗಳ ನಡುವೆ ಭಕ್ತಿಪೂರ್ವಕವಾಗಿ ರಥೋತ್ಸವ ನೆರವೇರಿತು.
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ನಡೆಸದೆ ದೇವಾಲಯದ ಆವರಣದಲ್ಲಿ ರಥೋತ್ಸವವನ್ನು ನಡೆಸಲಾಯಿತು. ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಪಂ ಸದಸ್ಯ ಅಪ್ಪಯ್ಯಣ್ಣ ಸೇರಿದಂತೆ ಅನೇಕ ಮುಖಂಡರು ರಥೋತ್ಸವಕ್ಕೆ ಸಾಕ್ಷಿಯಾದರು.
ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆಯಲು ಬೆಳಗಿನಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವದಲ್ಲಿ ಮುಖಂಡರಿಗೆ ಅವಕಾಶ / ಭಕ್ತರ ಆಕ್ರೋಶ: ಕರೊನಾ ಸೋಂಕನ್ನು ತಡೆಗಟ್ಟಲು ಸಾಂಕೇತಿಕವಾಗಿ ರಥೋತ್ಸವ ನಡೆಸಿದ ಕಾರಣ ರಥೋತ್ಸವ ನೋಡಲು ಭಕ್ತರಿಗೆ ಅವಕಾಶ ಸಿಗಲಿಲ್ಲ. ಆದರೆ, ಮುಖಂಡರುಗಳು ರಥೋತ್ಸವದಲ್ಲಿ ಕೋವಿಡ್-19 ನಿಯಮ ಮೀರಿ ಪಾಲ್ಗೋಂಡಿದ್ದು, ಸಾರ್ವಜನಿಕರಿಗೆ ಒಂದು ನಿಯಮ, ಮುಖಂಡರಿಗೆ ಒಂದು ನಿಯಮವೇ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

