
ಬೆಂ.ಗ್ರಾ.ಜಿಲ್ಲೆ: ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ಕುಮಾರ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ಟೌನ್ನ ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ, ಶ್ರೀ ವಿದ್ಯಾ ಗಣಪತಿ ದೇವಾಲಯ, ಶಾಲಾ ಕೊಠಡಿಗಳು, ಶಾಲಾ ಕಾಂಪೌಂಡ್ ಧ್ವಜಸ್ತಂಭ ಹಾಗೂ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೀರಾ ಬಡ ಕುಟುಂಬದಿಂದ ಬಂದಂತಹ ಮಕ್ಕಳಿಗೆ ಶಿಕ್ಷಣ ಕೊಡುವ ದೊಡ್ಡ ಉದ್ದೇಶದಿಂದ ಒಂದು ಟೆಂಟ್ ಶಾಲೆಯಿಂದ ಪ್ರಾರಂಭವಾಗಿ ಇಂದು ತನ್ನದೇ ಆದ ಸ್ವಂತ ಕಟ್ಟಡ, ಕಂಪ್ಯೂಟರ್ ಕೊಠಡಿ, ಶೌಚಾಲಯ ವ್ಯವಸ್ಥೆ, ಕಂಪೌಂಡ್ ಸೇರಿದಂತೆ ವ್ಯವಸ್ಥಿತ ಕಟ್ಟಡ ಹೊಂದಿರುವ ನೆಲಮಂಗಲದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬೆಳವಣಿಗೆ ಕುರಿತು ಹರ್ಷ ವ್ಯಕ್ತಪಡಿಸಿದರಲ್ಲದೆ,
ಈ ಶಾಲೆಯನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ದೃಢಸಂಕಲ್ಪ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್ ಕಾರಣದಿಂದ ಕಳೆದ 8 ತಿಂಗಳಿಂದ ಮಕ್ಕಳು ಶಾಲೆಗಳಿಲ್ಲದೆ, ತರಗತಿಗಳಿಲ್ಲದೆ ಆಸಕ್ತಿ ಕಳೆದುಕೊಂಡಿದ್ದು, ಪೋಷಕರು ಪಾಠ ಹೇಳಿಕೊಡುವಷ್ಟು ಸಮಯ, ಶಕ್ತಿ ಇಲ್ಲದಿರುವುದರಿಂದ 6 ರಿಂದ 9 ರವರೆಗೆ ವಿದ್ಯಾಗಮ ಪ್ರಾರಂಭ ಮಾಡಲಾಗಿದ್ದು, ಶೇಕಡಾ 80% ರಷ್ಟು ಮಕ್ಕಳ ಹಾಜರಾತಿ ಇರುವುದು ಸಂತಸ ತಂದಿದೆ ಎಂದರು.
ವಿದ್ಯಾಗಮದ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಮಯದಲ್ಲಿ, ನಮ್ಮ ಶಿಕ್ಷಕರು ಮಕ್ಕಳಿರುವ ಹಳ್ಳಿಗಳಿಗೆ, ಹಾಡಿಗಳಿಗೆ, ಕಾಲೋನಿಗಳಿಗೆ ಹೋಗಿ ಪಾಠ ಕಲಿಸಿದ್ದಾರೆ. ಅಶ್ವತ್ಥ ಕಟ್ಟೆಯ ಮೇಲೆ, ದೇವಾಲಯದ ಅವರಣದಲ್ಲಿ, ಮನೆಯ ಹಜಾರದಲ್ಲಿ ಪಾಠ ಹೇಳಿಕೊಟ್ಟಿರುವ ಎಲ್ಲ ಶಿಕ್ಷಕರಿಗೂ ನಾವು ಎರಡು ಕೈ ಮುಗಿದು ನಾವು ನಮಸ್ಕರಿಸಬೇಕು. ಬಹಳ ಸೊಗಸಾಗಿ ಕೆಲಸ ಮಾಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ್ದು, ಇಂದು ವಿದ್ಯಾಗಮ ಬೇರೆ ಸ್ವರೂಪದಲ್ಲಿ ಅಂದರೆ ಶಾಲೆಯ ಆವರಣದಲ್ಲಿ ಪಾಠಗಳನ್ನು ನಡೆಸುತ್ತಿದ್ದೇವೆ ಎಂದರು.
1ನೇ ತರಗತಿಯಿಂದ 5ನೇ ತರಗತಿಯವರೆಗೆ ತರಗತಿ ಆರಂಭಿಸಲು ನಾವು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲವಾದರಿಂದ ತಾಂತ್ರಿಕ ಸಲಹಾ ಸಮಿತಿಗೆ ಇಂದಿನ ಪರಿಸ್ಥಿತಿಯನ್ನು ವಿವರಿಸಿ, ಅವರ ಶಿಫಾರಸಿನ ನಂತರ ನಾವು ಮುಂದಿನ ಹೆಜ್ಜೆ ಇಡುತ್ತೇವೆ ಎಂದರಲ್ಲದೆ, ಅನೇಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಅಗತ್ಯತೆ ಇದ್ದು, ಕೇಂದ್ರ ಸರ್ಕಾರ ಅನುಮತಿ ಕೊಡದಿರುವ ಕಾರಣದಿಂದ ವಿದ್ಯಾರ್ಥಿಗಳ ಮನೆಗಳಿಗೆ ಪಡಿತರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರು ಈ ಶಾಲೆಯನ್ನು ದತ್ತು ತೆಗೆದುಕೊಂಡು 5 ಲಕ್ಷ ರೂ.ಗಳನ್ನು ಶಾಲೆಯ ಅಭಿವೃದ್ಧಿಗೆ ಘೋಷಣೆ ಮಾಡಿರುವುದನ್ನು ಸಚಿವರು ಶ್ಲಾಘಿಸಿ ಧನ್ಯವಾದ ತಿಳಿಸಿದರು.
ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಿಕ್ಷಣ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದ್ದು, ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಂದಿರುವ ಶ್ರದ್ಧಾ ಕೇಂದ್ರವಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ವತಿಯಿಂದ ಈ ಶಾಲೆಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.
ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮಿ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಮತ್ತಿತ್ತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

