
ದೊಡ್ಡಬಳ್ಳಾಪುರ: ಇತ್ತೀಚೆಗೆ ನಗರ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಚಾಲನೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರು ನಗರಸಭೆ ಆವರಣದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ಟಿ.ವೆಂಕಟರಮಣಯ್ಯ ನಗರದ ಹಲವು ಕಡೆ ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದರು. ಆ ವೇಳೆ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರೆ, ಮತ್ತೊಂದೆಡೆ ಶಾಸಕರ ನೇತೃತ್ವದಲ್ಲಿ ನಗರದ ಅಭಿವೃದ್ಧಿಯನ್ನು ಸಹಿಸಲಾರದೆ ಬಿಜೆಪಿ ಪಕ್ಷದವರು ನಗರದ ಅಭಿವೃದ್ದಿಯನ್ನು ಹಾಳು ಮಾಡುವ ಉದ್ದೇಶದಿಂದ ಅಡಚಣೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಆರಂಭಿಸಿದರು.
ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನೆ ನಡೆಸಿ ಮಾತನಾಡಿದ ಬಿಜೆಪಿ ಪಕ್ಷದ ಮುಖಂಡರು, ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಸಂತೋಷದ ವಿಷಯ. ಆದರೆ ಈ ಕಾಮಗಾರಿಗಳ ಉದ್ಘಾಟನೆಗೆ ಶಿಷ್ಟಾಚಾರದಂತೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿದೆ ಶಿಷ್ಟಾಚಾರವನ್ನು ಉಲ್ಲಂಘಿಸಿದಲ್ಲದೆ, ಸರ್ಕಾರದ ಅನುದಾನವನ್ನು ಶಾಸಕರ ಅನುದಾನವೆಂಬಂತೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಶಂಕುಸ್ಥಾಪನೆ ನಡೆದಿರುವುದು ಖಂಡನೀಯ. ಇನ್ನು ಮುಂದೆ ನಗರಸಭೆ ವ್ಯಾಪ್ತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಶಿಷ್ಟಾಚಾರವನ್ನು ಅನುಸರಿಸಿ ಸಂಸದರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಒಂದು ವೇಳೆ ಇದೇ ರೀತಿಯ ಶಿಷ್ಟಾಚಾರವನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ನಡೆಸಿದ್ದೆ ಆದರೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮತ್ತೊಂದೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು, ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗುತ್ತಾ ನಗರದ ಅಭಿವೃದ್ಧಿಯನ್ನು ಸಹಿಸಲಾರದೆ ಬಿಜೆಪಿ ಮುಖಂಡರು ಈ ರೀತಿಯ ಅನಗತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಅಭಿವೃದ್ಧಿಗೆ ಅಡಚಣೆ ಉಂಟು ಮಾಡುತ್ತಿರುವುದು ಸರಿಯಿಲ್ಲ ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಬಿಜೆಪಿಯ ಕೆಲ ಮುಖಂಡರು ಹಸ್ತಕ್ಷೇಪ ಉಂಟುಮಾಡಿ ಕಾಮಗಾರಿಗಳನ್ನು ನಿಲ್ಲಿಸಿರುವುದು ಬಹಿರಂಗ ಸತ್ಯ ಎಂದು ಆರೋಪಿಸಿದರು.
ಪ್ರತಿಭಟನೆ ಸ್ಥಳಕ್ಕೆ ಬಂದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಆಚರಿಸಬೇಕಾದ್ದು ಅಧಿಕಾರಿಗಳ ಕೆಲಸವೇ ಹೊರತು ನನ್ನದಲ್ಲ. ಕೋವಿಡ್-19 ಕಾರಣ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರುವಂತಿಲ್ಲ ಎಂಬ ನಿಯಮವಿದೆ. ಆದಾಗ್ಯೂ ಮುಂದಿನ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಹೆಚ್ಚರಿಕೆವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲೂಕಿಗೆ ಸಮ್ಮಿಶ್ರ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸ್ಥಳೀಯ ಮುಖಂಡರು ತಡೆಹಿಡಿಸಿದ್ದಾರೆ. ಆ ಮೂಲಕ ತಾಲೂಕಿನ ಅಭಿವೃದ್ಧಿಯಾಗದಂತೆ ತಡೆಯುತ್ತಿದ್ದಾರೆ. ತಾಲೂಕಿನ ಜನತೆಯ ಅನುಕೂಲಕ್ಕಾಗಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಗೆ ಅನುಮೋದನೆ ನೀಡುವಂತೆ ಪದೇ ಪದೇ ಸದನದಲ್ಲಿ ಮನವಿಮಾಡಿದರು ಯಡಿಯೂರಪ್ಪ ಸರ್ಕಾರ ಅನುಮೋದನೆ ನೀಡದೆ ತಾಲೂಕಿನ ಜನತೆಗೆ ವಂಚಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

