
ಬೆಂಗಳೂರು: ವಿಶ್ವದ ನಾನಾ ದೇಶಗಳಿಗೆ ಕೋವಿಡ್-19 ಲಸಿಕೆ ಒದಗಿಸುತ್ತಿರುವ ಭಾರತ ದೇಶಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ಅರ್ಪಿಸಿದೆ.
ಇಡೀ ಜಗತ್ತನ್ನು ಕಾಡುತ್ತಿರುವ ಮಾರಕ ಕರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಭಾರತ, ಕೋವಿಡ್ ಲಸಿಕೆ ಹಂಚಿಕೆಯಲ್ಲಿ ನಿರಂತರ ಬೆಂಬಲ ನೀಡಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಶ್ವ ಆರೀಗ್ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೊಮ್ ಗೆಬ್ರೆಯೆಸಸ್, ಕೋವಿಡ್ ವಿರುದ್ಧದ ಜಾಗತಿಕ ಹೋರಾಟಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಭಾರತ ಮತ್ತು ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಾವು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಈ ವೈರಸ್ನಿಂದ ಜೀವ ಮತ್ತು ಜೀವನಗಳನ್ನು ಉಳಿಸಬಹುದು ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರೂ ಕೂಡ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, ಕೆರೊನಾ ವಿರುದ್ಧ ಹೋರಾಟದಲ್ಲಿ ಭಾರತದ ಪಾತ್ರ ಮಹತ್ವದ್ದು. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವುದರಲ್ಲೂ ಭಾರತ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದ್ದಾರೆ.
ಬ್ರೆಜಿಲ್ಗೆ ಭಾರತ 20 ಲಕ್ಷ ಡೋಸ್ ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ. ಇದಕ್ಕೆ ಬ್ರೆಜಿಲ್ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿರುವ ರೀತಿ ವಿಶೇಷವಾಗಿದ್ದು, ರಾಮಾಯಣದಲ್ಲಿ ಯುದ್ಧ ನಡೆಯುತ್ತಿದ್ದಾಗ, ಹನುಮಂತ ಔಷಧ ಪರ್ವತಕ್ಕೆ ತೆರಳಿ, ಅಲ್ಲಿಂದ ಸಂಜೀವಿನಿ ಪರ್ವತವನ್ನು ಹೊತ್ತು ಲಂಕೆಗೆ ತೆರಳಿ ಲಕ್ಷ್ಮಣನ ಜೀವ ಉಳಿಸುತ್ತಾನೆ. ಆ ಚಿತ್ರವನ್ನು ಟ್ವೀಟ್ ಮಾಡಿರುವ ಬೊಲ್ಸೊನಾರೊ, “ಧನ್ಯವಾದ ಭಾರತ’ ಎಂದಿದ್ದಾರೆ.

