
ಬೆಂಗಳೂರು: ಇಲ್ಲಿನ ಆದಿಚುಂಚನಗಿರಿ ವಿಜಯನಗರದ ಶಾಖಾಮಠದಲ್ಲಿ ಶ್ರೀ ನಿರ್ಮಾಲಾನಂದಸ್ವಾಮಿಜಿಯವರ ಭೇಟಿ ಮಾಡಿದ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದ ಕೃಷಿ ಭೂಸಂರಕ್ಷಣಾ ಸಮಿತಿಯ ನಿಯೋಗ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಸಾವನೆಯನ್ನು ಕೈ ಬಿಟ್ಟು, ಬದಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವಂತೆ ಮನವಿ ಪತ್ರ ನೀಡಿದರು.
ಈ ವೇಳೆ ಶ್ರೀಗಳೊಂದಿಗೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಹುಲಿಕುಂಟೆ ವ್ಯಾಪ್ತಿಯಲ್ಲಿ ಅಂದಾಜು 600 ಎಕರೆ ಕೃಷಿಭೂಮಿಯನ್ನು multi-modal Logistic park (ಎಂ ಎಂ ಎಲ್ ಪಿ) ಯೋಜನೆಗೆ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಕಳೆದ ವರ್ಷ ಅ.17 ರಂದು ಸ್ಥಳ ಪರಿಶೀಲನೆ ನಡೆಸಿ ಈ ವ್ಯಾಪ್ತಿಯಲ್ಲಿನ ಗ್ರಾಮಗಳ ಭೂಮಿಯನ್ನು ಕೈಗಾರಿಕಾ ಪ್ರದೇಶ ಉದ್ದೇಶಕ್ಕಾಗಿ ಭೂ ಸ್ವಾಧೀನ ಪಡಿಸಬಹುದೆಂದು ಕೈಗಾರಿಕಾ ಮಂಡಳಿಗೆ ವರದಿಯನ್ನು ಸಲ್ಲಿಸಿರುತ್ತಾರೆ. ಆದರೆ ಈ ಜಮೀನುಗಳನ್ನು ವ್ಯವಸಾಯಕ್ಕೆ ಫಲವತ್ತಾದ ಕೃಷಿ ಭೂಮಿಯಾಗಿದೆ. ಬೆಂಗಳೂರಿಗೆ ಸಮೀಪದಲ್ಲಿರುವ ದೊಡ್ಡಬಳ್ಳಾಪುರ ತಾಲೂಕು “ಮಿಲ್ಕ್ ಅಂಡ್ ಸಿಲ್ಕ್” ಗೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಇಲ್ಲಿನ ರೈತರು ಹಾಲು ಉತ್ಪಾದನೆ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ.
ಹುಲಿಕುಂಟೆ ಗ್ರಾಮದ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಅತಿ ಸಣ್ಣ ಹಿಡುವಳಿದಾರರಾಗಿರುವುದರಿಂದ ಸಂಪೂರ್ಣವಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನಿತರ ದೈನಂದಿನ ಚಟುವಟಿಕೆಗಳಾದ ಹಾಲು ಉತ್ಪಾದನೆ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಅತಿ ಹೆಚ್ಚಾಗಿ ಬೆಳೆಯುತ್ತಿರುವ ವ್ಯವಸಾಯವನ್ನೇ ಅವಲಂಬಿಸಿರುತ್ತಾರೆ. ಅಲ್ಲದೇ ಗ್ರಾಮಸ್ಥರಿಗೆ ಈ ಭೂಮಿಯನ್ನು ಬಿಟ್ಟರೆ ಬೇರೆ ಭೂಮಿ, ಮನೆಗಳು, ನಿವೇಶನಗಳು ಇರುವುದಿಲ್ಲ ಸರ್ಕಾರದ ನಿರ್ಧಾರದಿಂದ ರೈತರು ಬೀದಿಗೆ ಬೀಳುವ ಆತಂಕ ಉಂಟಾಗಿದ್ದು, ಶ್ರೀಗಳು ರೈತರ ಪರವಾಗಿ ಕೃಷಿ ಭೂಮಿ ಸ್ವಾಧೀನ ಪ್ರಸ್ತಾವನೆ ಕೈಬಿಟ್ಟು ಬದಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳು ಸರ್ಕಾರಕ್ಕೆ ಮನವಿ ಮಾಡುವಂತೆ ಕೋರಿದರು.
ಈ ವೇಳೆ ಸೃಷ್ಟಿ ಸಂಘದ ಅಧ್ಯಕ್ಷ ದೇವರಾಜು, ಬೇಟೆ ರಂಗನಾಥ ಸ್ವಾಮಿ ಸೇವಾ ಸಮಿತಿಯ ಹೆಚ್.ಎಸ್.ಸೋಮಶೇಖರ್, ದೇವಾಲಯದ ಅರ್ಚಕ ಗೋಪಿನಾಥ್, ಕೃಷಿ ಭೂಸಂರಕ್ಷಣಾ ಸಮಿತಿಯ ವಿವೇಕ್, ಹುಲಿಕುಂಟೆ ಗ್ರಾಪಂ ಉಪಾಧ್ಯಕ್ಷ ಸೋಮಶೇಖರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

