
ಬೆಂ.ಗ್ರಾ.ಜಿಲ್ಲೆ: ಬೀಡಿ, ಸಿಗರೇಟು, ಗುಟ್ಕಾ, ಪಾನ್ಮಸಾಲಾ ಮುಂತಾದ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಜಗಿದು, ಉಗಿಯುವಂತಿಲ್ಲ. ಆದರೂ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖಾಧಿಕಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತಂಬಾಕು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮೇಲೆ ದಿಢೀರ್ ಕಾರ್ಯಾಚರಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಪಾನ್ಮಸಾಲಾ ಜಗಿಯುವವರ ವಿರುದ್ಧ ಆರೋಗ್ಯ ಇಲಾಖೆಯವರು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ದಂಡ ವಿಧಿಸುವುದರಂದಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಜನರನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಗಜ ಅಂತರದಲ್ಲಿ ಧೂಮಪಾನ ಮಾಡುವುದು, ತಂಬಾಕು ಉತ್ಪನ್ನಗಳನ್ನು ಅಂಗಡಿ ಮಳಿಗೆಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದರಲ್ಲದೆ, ಈ ಕುರಿತು ಶಾಲೆಗಳಲ್ಲಿ ಗೋಡೆ ಬರಹ ಬರೆಯುವಂತೆ ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕಿನ ವಿವಿಧ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರ ವಿರುದ್ಧ ಹಾಗೂ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಹಕಾರ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ವಿದ್ಯಾ ಮಾತನಾಡಿ, ತಂಬಾಕು ದುಷ್ಪರಿಣಾಮ ಕುರಿತು 100 ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಗುರಿಯನ್ನು ಹೊಂದಲಾಗಿದ್ದು, ಈವರೆಗೂ ಕೋವಿಡ್ ಕಾರಣದಿಂದ 13 ಶಾಲೆಗಳಿಗೆ ಮಾತ್ರ ಭೇಟಿ ನೀಡಿ ಅರಿವು ಮೂಡಿಸಲಾಗಿದೆ ಎಂದಾಗ, ಜಿಲ್ಲಾಧಿಕಾರಿ ಅವರು ನೆಪಗಳನ್ನು ಹೇಳದೆ ಫೆಬ್ರವರಿ ಮಾಸಾಂತ್ಯದೊಳಗೆ ನಿಗದಿತ ಗುರಿಗಳನ್ನು ತಲುಪಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಜಿಲ್ಲಾ ಹಂತದಲ್ಲಿ ಅನಿರೀಕ್ಷಿತ ದಾಳಿ ನಡೆಸಿ 51 ಪ್ರಕರಣಗಳನ್ನು ದಾಖಲಿಸಲಾಗಿದ್ದು, 8750 ರೂ.ಗಳ ದಂಡ ಸಂಗ್ರಹಿಸಲಾಗಿದ್ದು, ಸ್ವತಃ ತಂಬಾಕು ತ್ಯಜಿಸಲು ಮುಂದಾಗುವವರಿಗೆ ದೊಡ್ಡಬಳ್ಳಾಪುರ ಆರೋಗ್ಯ ಕೇಂದ್ರದಲ್ಲಿ ಕೌನ್ಸೆಲಿಂಗ್ ಮಾಡಗುತ್ತಿದೆ ಎಂದು ಮಾಹಿತಿ ನೀಡಿದರು.
ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ತ್ಯಾಗರಾಜು ಅವರು ಮಾತನಾಡಿ, ಪೊಲೀಸ್ ಇಲಾಖೆಯಿಂದ ತಂಬಾಕು ಸೇವನೆ ನಿಯಂತ್ರಣದಡಿಯಲ್ಲಿ 2502 ಪ್ರಕರಣಗಳನ್ನು ದಾಖಲಿಸಲಾಗಿದ್ದು, 2,58,000 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಂಜುಳಾದೇವಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಾಂತಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

