
ಹೊಸಕೋಟೆ: ನಗರಸಭೆಯ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಸ್ಥಳೀಯ ಶಾಸಕರನ್ನು ಕಡೆಗಣಿಸಿರುವ ಬಗ್ಗೆ ಪ್ರಶ್ನೆ ಮಾಡಲು ತೆರಳಿದ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಚ್ ಮಾಡಿದ ಹಿನ್ನೆಲೆ ಶಾಸಕ ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ತಾಲೂಕಿನಲ್ಲಿ ಜನರಿಂದ ಮತ ಪಡೆದು ಸಂವಿಧಾನದಡಿಯಲ್ಲಿ ಆಯ್ಕೆ ಮಾಡಿದ ನನ್ನನ್ನು ಕಡೆಗಣಿಸಿ, ಸಚಿವ ಎಂಟಿಬಿ ನಾಗರಾಜ್ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಮಾಡುವ ಮೂಲಕ ಸಂವಿಧಾನಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರಭಾವ ಬಳಸಿ ನನ್ನ ಬೆಂಬಲಿಗರನ್ನೆ ಗುರಿಯಾಗಿರಿಸಿಕೊಂಡು, ಪೊಲೀಸರ ಮೂಲಕ ಲಾಠಿ ಚಾರ್ಚ್ ಮಾಡಿಸುವ ಕೆಲಸ ಮಾಡಿಸಿದ್ದಾರೆ. ಈ ವೇಳೆ ಸುಮಾರು ಐದಾರು ಜನರಿಗೆ ಪೆಟ್ಟಾಗಿದೆ. ಸಚಿವರ ಅಣತಿಯಂತೆ ವರ್ತಿಸುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸುತ್ತೇನೆ. ಎಂದರು.
ಈ ವೇಳೆ ಶಾಸಕ ಶರತ್ ಬಚ್ಚೇಗೌಡರನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ರವಿ ಡಿ.ಚನ್ನಣ್ಣನವರ್ ಹಾಗೂ ಹಿರಿಯ ಅಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಮಣಿಯದೆ ಲಾಠಿ ಚಾರ್ಜ್ ಮಾಡಿದ ಡಿವೈಎಸ್‍ಪಿಯವರನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟುಹಿಡಿದರು.
ನಗರದಲ್ಲಿ ನಡೆದ ಶಿಷ್ಟಾಚಾರ ಉಲ್ಲಂಘನೆ, ಕ್ಷೇತ್ರದಲ್ಲಿ ಪೊಲೀಸರ ಅಧಿಕಾರ ವೈಫಲ್ಯ, ಲಾಠಿ ಚಾರ್ಚ್ ಬಗ್ಗೆ ಸೋಮವಾರ ವಿಧಾನಸಭೆ ಅಧಿವೇಶದನಲ್ಲಿ ಸಭಾಧ್ಯಕ್ಷರ ಅನುಮತಿ ಪಡೆದು ಚರ್ಚೆ ಮಾಡುತ್ತೇನೆ. ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಅನುಮತಿ ಪಡೆಯದೆ ಅಧಿಕಾರ ದುರುಪಯೋಗಪಡಿಸಿಕೊಂಡು ಲಾಠಿ ಚಾರ್ಚ್ ಮಾಡಿದ ಡಿವೈಎಸ್‍ಪಿ ಉಮಾಶಂಕರ್, ಸಿಪಿಐ ರಂಗಸ್ವಾಮಿ, ಎಸ್ಸೈ ರಾಜು ಅವರ ವಿರುದ್ದ ಎಸ್‍ಪಿ ಅವರಿಗೆ ದೂರು ನೀಡಲಾಗಿದೆ. ಐಜಿಗೂ ಸಹ ದೂರು ನೀಡಲಿದ್ದು, ಮೂರು ದಿನಗಳಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸದಿದ್ದಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಮಂಜುನಾಥ್, ಬಿ.ವಿ.ಬೈರೇಗೌಡ, ಕೆ.ಎಸ್.ಸುರೇಶ್, ಬಿ.ವಿ.ರಾಜಶೇಖರ್‍ಗೌಡ, ಗೋಪಾಲ್, ಟಿ.ಎಸ್.ರಾಜಶೇಖರ್, ನಗರಸಭೆ ಸದಸ್ಯರಾದ ಕೇಶವಮೂರ್ತಿ, ಗೌತಮ್ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

