
ಬೆಂ.ಗ್ರಾ.ಜಿಲ್ಲೆ: ತಂಬಾಕಿನಿಂದ ತಯಾರಿಸುವ ಯಾವುದೇ ಉತ್ಪನ್ನವನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳೇ ಅಧಿಕವಾಗಿರುವುದರಿಂದ ತಂಬಾಕು ಉತ್ಪನ್ನಗಳ ನಿಯಂತ್ರಣ ಅಗತ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಕೋಪ್ಟಾ 2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ತಂಬಾಕು ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರ ಮಾಡುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತ್ತಷ್ಟು ಉತ್ತೇಜನಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ ಎಂದರಲ್ಲದೆ, ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆಯನ್ನು ನಿಯಂತ್ರಣದಲ್ಲಿಡಲು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ಕೆಲಸಗಳು ನಡೆಯುತ್ತಿವೆ ಎಂದರು.
ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳ ಪ್ರದರ್ಶನಕ್ಕೂ ಮುನ್ನ ತಂಬಾಕು ಸೇವನೆಯಿಂದ ಎದುರಿಸಬಹುದಾದ ಆರೋಗ್ಯ ಸಮಸ್ಯೆಗಳ ಕುರಿತು ಧೂಮಪಾನ ಆರೋಗ್ಯಕ್ಕೆ ಹಾನಿಕಾರವೆಂಬ ದೃಶ್ಯವನ್ನು ಪ್ರಸಾರಿಸುವ ಮೂಲಕ ಮೂಡಿಸುತ್ತಿರುವ ಜಾಗೃತಿಯನ್ನು ಸಾರ್ವಜನಿಕರು ಅರ್ಥೈಸಿಕೊಂಡು, ತಂಬಾಕು ಉತ್ಪನ್ನಗಳ ವ್ಯಸನದಿಂದ ಮುಕ್ತರಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾಲಕಾಲಕ್ಕೆ ಪೋಲಿಸ್, ಅಬಕಾರಿ, ನಗರಾಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ತಂಡ ತಂಬಾಕು ಉತ್ಪನ್ನ ಮಾರಾಟ ಮತ್ತು ಸೇವನೆ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ದಂಡ ವಿಧಿಸಿ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸಬಾರದು ಎಂದು ಅರಿವು ಮೂಡಿಸಬೇಕು ಎಂದರು.
ತಂಬಾಕು ವ್ಯಸನ ಬಿಡಿಸಲು ದೊಡ್ಡಬಳ್ಳಾಪುರದಲ್ಲಿ ತಂಬಾಕು ಮುಕ್ತ ವ್ಯಸನ ಮುಕ್ತ ಕೇಂದ್ರವನ್ನು ಶುರು ಮಾಡಲಾಗಿದ್ದು, ಅಧಿಕಾರಿಗಳು ವ್ಯಸನಿಗಳನ್ನು ಗುರುತಿಸಿ ಸಮಾಲೋಚನೆ ನಡೆಸಲಾಗುತ್ತಿದೆ. ಕಾಲಕಾಲಕ್ಕೆ ತಂಬಾಕು ಉತ್ಪನ್ನಗಳ ವ್ಯಸನಿಗಳನ್ನು ಮುಕ್ತ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ ಮಾತನಾಡಿ ರಾಷ್ಟ್ರ್ಟ್ರೀಯ ತಂಬಾಕು ನಿಯಂತ್ರಣದ ಬಗ್ಗೆ ನಾವು ತುಲನಾತ್ಮಕವಾಗಿ ಯೋಚನೆ ಮಾಡಬೇಕು ಎಂದರಲ್ಲದೆ, 18-50 ವರ್ಷ ವಯೋಮಾನದವರು ಹೆಚ್ಚು ತಂಬಾಕಿನ ವ್ಯಸನಕ್ಕೆ ಬಲಿಯಾಗುತ್ತಿರುವುದರಿಂದ ದೇಶದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಯುವ ಜಿ.ಡಿ.ಪಿ ಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ತಂಬಾಕು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿದು, ಸುತ್ತಮುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುವುದಲ್ಲದೆ, ಆರೋಗ್ಯ ಹಾಳುಮಾಡಿಕೊಳ್ಳುವುದು ಸಮಂಜಸವಲ್ಲ ಎಂದರಲ್ಲದೆ, ಜವಾಬ್ದಾರಿಯುತ ನಾಗರೀಕರಾಗಿ ಶುಚಿತ್ವ ಕಾಪಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಧಮೇರ್ಂದ್ರ, ಡಾ. ವಿದ್ಯಾರಾಣಿ, ಅಬಕಾರಿ ಪೊಲೀಸ್ ಉಪಧೀಕ್ಷಕ ರವೀಂದ್ರ ಸೇರಿದಂತೆ ಶಾಲಾ ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

