ದೊಡ್ಡಬಳ್ಳಾಪುರ: ಫೆ.20ರಂದು ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ನಡೆದ ಜಿಲ್ಲಾಕಾರಿಗಳ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ 688 ವಿವಿಧ ಸಾಮಾಜಿಕ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ಕಂದಾಯ ಸಮಸ್ಯೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.
ಸರ್ಕಾರ ಒಂದು ಕಡೆ. ಜನ ಒಂದು ಕಡೆ ಇರುವ ಪದ್ಧತಿ ಹೋಗಿ ಸರ್ಕಾರವೇ ಮನೆಯ ಬಾಗಿಲಿಗೆ ಹೋಗಬೇಕು. ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಬೇಕು ಎನ್ನುವ ಉದ್ದೇಶದಿಂದ ಕಂದಾಯ ಇಲಾಖೆಯಿಂದ ರಾಜ್ಯದ 227 ತಾಲೂಕುಗಳಲ್ಲಿ ಏಕಕಾಲಕ್ಕೆ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ರಾಜ್ಯ ಮಟ್ಟದ ಕಾರ್ಯಕ್ರಮದ ಚಾಲನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಿಂದ ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ, ಶಾಸಕ ಟಿ.ವೆಂಕಟರಮಣಯ್ಯರೊಂದಿಗೆ ಚಾಲನೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ 58, ವೃದ್ಧಾಪ್ಯ ವೇತನ 97, ವಿಧವಾ ವೇತನ 17, ಅಂಗವಿಕಲರಿಗೆ -4, ಮನಸ್ವಿನಿ 3 ಮಂದಿಗೆ ಪಿಂಚಣಿಗಳನ್ನು ವಿತರಿಸಲಾಗಿದೆ. ಎನ್‍ಎಸ್‍ಎಪಿ ಅಡಿಯಲ್ಲಿ 3 ಮಂದಿ ವಿಧವೆಯರಿಗೆ ನೆರವು ನೀಡಲಾಗಿದೆ.
30 ಪವತಿ ಖಾತೆಗಳನ್ನು ಮಾಡಿಕೊಡಲಾಗಿದೆ. 16 ಪಹಣಿ ತಿದ್ದುಪಡಿ, ಪೋಡಿ ಮುಕ್ತ ಗ್ರಾಮದಡಿ 5 ಫಲಾನುಭವಿಗಳಿಗೆ ಪೋಡಿ ಮಾಡಿಕೊಡಲಾಗಿದೆ. 381 ಆಧಾರ್‍ಕಾರ್ಡ್ ತಿದ್ದುಪಡಿ ಮಾಡಿ 63 ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ. ಸಾಗುವಳಿ ಚೀಟಿಯನ್ವಯ 12 ಮಂದಿಗೆ ಖಾತೆ ಮಾಡಲಾಗಿದೆ ಸರ್ಕಾರದ ವಿವಿಧ ಇಲಾಖೆಗಳಿಗೆ 11 ಜಮೀನು ಮಂಜೂರಾಗಿದೆ ಎಂದು ತಹಸೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಹೊಸಹಳ್ಳಿ ಗ್ರಾಮದ ಸರ್ವೆ ನಂ.55ರಲ್ಲಿ 5 ಎಕರೆ ಭೂಮಿಯನ್ನು 20*30 ಅಳತೆಯಲ್ಲಿ 400 ಮಂದಿಗೆ ವಸತಿ ನಿರ್ಮಾಣಕ್ಕೆ ಮಂಜೂರು ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಜಿಲ್ಲಾಕಾರಿಗಳಿಗೆ ಹಸ್ತಾಂತರ ಮಾಡುವಂತೆ ಹಾಗೂ ಸ್ಮಶಾನ ಒತ್ತುವರಿ ತೆರವಿಗೆ ಸಚಿವ ಅಶೋಕ್ ಸೂಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್, ಶ್ರವಣ ಸಾಧನಗಳನ್ನು ವಿತರಿಸಲಾಗಿದೆ.
ತಿದ್ದುಪಡಿ ಹಾಗೂ ಸಣ್ಣಪುಟ್ಟ ದೋಷಗಳು ಸ್ಥಳದಲ್ಲಿಯೇ ಬಗೆಹರಿದಿವೆ. ಸಾಮಾಜಿಕ ಭದ್ರತಾ ಯೋಜನೆಯ ಬಾಕಿ ಇದ್ದ ಪ್ರಕರಣಗಳು ಇತ್ಯರ್ಥವಾಗಿವೆ. ಕಾರ್ಯಕ್ರಮ ಯಶಸ್ವಿಯಾಗಿದ್ದು, ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳು ಶೀಘ್ರವಾಗಿ ವಿಲೇವಾರಿಯಾಗಿದೆ. ಆಧಾರ್ ಕೌಂಟರ್ ಮಾಡಿದ್ದರಿಂದ 381 ಆಧಾರ್‍ಕಾರ್ಡ್‍ಗಳು ತಿದ್ದುಪಡಿಯಾಗಿವೆ. ಹೆಚ್ಚು ಸಮಯವಿಲ್ಲದ ಖಾತೆ ಬದಲಾವಣೆ ಮೊದಲಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥವಾಗಬಹುದಾಗಿದೆ. ಕಂದಾಯ ಇಲಾಖೆಗೆ ಆಧಾರ್ ಕಾರ್ಡ್-ಬಿಪಿಎಲ್ ಕಾರ್ಡ್‍ಗೆ ಈಗಾಗಲೇ ಹೊಸ ನವೋದಯ ಆ್ಯಪ್ ತಂತ್ರಾಂಶ ರೂಪಿಸಿದ್ದು, ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮ ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ಇದೆ ಎನ್ನುತ್ತಾರೆ ತಹಸೀಲ್ದಾರ್ ಟಿ.ಎಸ್.ಶಿವರಾಜ್.
ಬಹಿರಂಗ ವಿಲೆವಾರಿಯಾಗಲಿ: ಆಧಾರ್, ಮತದಾರರ ಗುರುತಿನ ಚೀಟಿಗಳ ವಿತರಣೆಗೆ ಆದ್ಯತೆ ನೀಡುವುದಕ್ಕಿಂತ, ಜಿಲ್ಲಾಧಿಕಾರಿ, ತಹಸೀಲ್ದಾರ್ ರಂತಹ ಅಧಿಕಾರಿಗಳು ಭಾಗವಹಿಸುವ ಇಂತಹ ಕಾರ್ಯಕ್ರಮಗಳಲ್ಲಿ ಪೋಡಿ ಮುಕ್ತ ಗ್ರಾಮ ಘೋಷಣೆ, ಕಂದಾಯ ದಾಖಲೆಗಳಾದ ಪಹಣಿ, ಮ್ಯುಟೇಷನ್, ಮೊದಲಾದ ದಾಖಲಾತಿಗಳು ರೈತರಿಗೆ ತಲುಪಬೇಕು. ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಪ್ರಕರಣಗಳ ದಾಖಲೆ ಪರಿಶೀಲಿಸಿ ಬಹಿರಂಗವಾಗಿ ವಿಳೇವಾರಿಯಾಗಬೇಕು.ಪೌತಿ ಖಾತೆಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಯಾವುದೇ ದಾಖಲೆಗಳಿಲ್ಲದೇ ಹೇಳಿಕೆ ಪಡೆದು ಮಾಡಿಕೊಡಬೇಕು ಎನ್ನುತ್ತಾರೆ ರೈತ ನಟರಾಜ್.
ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ: ನಮ್ಮ ತಂದೆ ಸಂಜೀವಪ್ಪ ಪವತಿಯಾಗಿದ್ದು ಅವರ ಪವತಿ ಖಾತೆಯನ್ನು ನಮ್ಮ ತಾಯಿ ರಂಗಮ್ಮ ಹೆಸರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಿ 6 ತಿಂಗಳಾಗಿತ್ತು, ಕಾರ್ಯಕ್ರಮದಲ್ಲಿ ತ್ವರಿತವಾಗಿ ಖಾತೆ ಬದಲಾವಣೆಯಾಯಿತು. ಇಲ್ಲವಾದಲ್ಲಿ ವರ್ಷಗಟ್ಟಲೆ ಅಲೆಯಬೇಕಿತ್ತು. ಕಾರ್ಯಕ್ರಮದಲ್ಲಿ ಅಧಿಕಾರಿಗಳು ಒಂದು ತಿಂಗಳ ಮೊದಲೇ ಸಿದ್ದತೆಗಳನ್ನು ಮಾಡಿಕೊಂಡು, ಯಶಸ್ಸು ಮಾಡಿದ್ದಾರೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ ಎನ್ನುತ್ತಾರೆ ಹೊಸಹಳ್ಳಿ ಗ್ರಾಮದ ಎಚ್.ಎಸ್.ಮಂಜುನಾಥ್.
ಮರೆಯಲಾಗದ ಕ್ಷಣ: ವಾಸ್ತವ್ಯದ ವೇಳೆ ನಮ್ಮ ಮನೆಯಲ್ಲಿಯೇ ಕಂದಾಯ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಅಧಿಕಾರಿಗಳು ಉಪಹಾರ ಸೇವಿಸಿದ್ದು, ಮರೆಯಲಾಗದ ಕ್ಷಣಗಳು.ಕಾರ್ಯಕ್ರಮದಲ್ಲಿ ಎನ್‍ಎಸ್‍ಎಪಿ ಅಡಿಯಲ್ಲಿ ನನಗೆ ನೆರವು ದೊರೆತಿದೆ. ಖಾತೆ ವಿಚಾರವಾಗಿ ನಮ್ಮ ಮಕ್ಕಳ ಹೆಸರಿಗೆ ಜಂಟಿ ಖಾತೆ ಮಾಡಲಾಗಿದ್ದು, ವಿಭಾಗ ಪತ್ರ ಇನ್ನು ಒಂದೂವರೆ ತಿಂಗಳಲ್ಲಿ ಆಗಲಿದೆ. ಮಗನಿಗೆ ಕೆಲಸ ನೀಡುವ ಭರವಸೆ ದೊರೆತಿದೆ ಎನ್ನುತ್ತಾರೆ ಹೊಸಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….