ಬೆಂ.ಗ್ರಾ.ಜಿಲ್ಲೆ: ಪ್ರತಿಯೊಬ್ಬರ ಜೀವ ಅತ್ಯಮೂಲ್ಯವಾದದ್ದು, ಆದ್ದರಿಂದ ಜೀವ ಉಳಿಸುವುದು ಎಲ್ಲರ ಗುರುತರ ಜವಾಬ್ದಾರಿಯಾಗಿದೆ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ಅವರು ವೈದ್ಯರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಹೊಸಕೋಟೆ ತಾಲ್ಲೂಕಿನ ಎಂ.ವಿ.ಜೆ. ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ, ಕೋವಿಡ್-19 ನಿರ್ವಹಣೆ, ಸೋಂಕಿತರ ಆರೈಕೆ ಕುರಿತು ಪರಿಶೀಲಿಸಿ, ನಂತರ ಅವರು ಮಾತನಾಡಿದರು.
ಕೋವಿಡ್ ಕೇರ್ ಸೆಂಟರ್ ಗಳನ್ನು ಗಟ್ಟಿಗೊಳಿಸಿದರೆ, ಆಸ್ಪತ್ರೆಗಳಿಗೆ ಸ್ವಲ್ಪ ಹೊರೆ ಕಡಿಮೆ ಆಗುತ್ತದೆ. ಈ ವಿಚಾರದ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ ಕಂದಾಯ ಸಚಿವರು ಕೋವಿಡ್ ಸೋಂಕು ದೃಢ ಪಟ್ಟವರು ಕೂಡಲೇ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸೋಂಕು ಉಲ್ಬಣಗೊಂಡು ಉಸಿರಾಟದ ತೊಂದರೆಯಾದಾಗ ಆಸ್ಪತ್ರೆಗೆ ಓಡಿ ಬರುತ್ತಿರುವುದರಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದ್ದು, ಪಾಸಿಟಿವ್ ಬಂದ ಕೂಡಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಆಸ್ಪತ್ರೆಗೆ ಬಂದು, ವೈದ್ಯರ ಸಲಹೆ, ಸೂಚನೆಗಳನ್ವಯ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪೌರಾಡಳಿತ ಹಾಗೂ ಸಕ್ಕರೆ ಸಚಿವರಾದ ಎನ್. ನಾಗರಾಜು (ಎಂ.ಟಿ.ಬಿ) ಅವರು ಮಾತನಾಡಿ, ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಬೆಡ್ ಸಿಗದ ಕಾರಣ ರೋಗಿಗಳಿಗೆ ಸಾಯುತ್ತಿದ್ದಾರೆ. ವೈದ್ಯರನ್ನು ದೇವರ ರೀತಿಯಲ್ಲಿ ಜನ ಕಾಣುತ್ತಾರೆ ಆದ್ದರಿಂದ ವೈದ್ಯರು ಜನರ ಜೀವವನ್ನು ಕಾಪಾಡುವಂತರಾಗಬೇಕು ಎಂದು ಹೇಳಿದರು.
ಎಂ.ವಿ.ಜೆ. ಆಸ್ಪತ್ರೆ ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಧರಣಿ ಅವರು ಮಾತನಾಡಿ, ನಮ್ಮಲ್ಲಿ ಕೋವಿಡ್ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೇವೆ ಸಲ್ಲಿಸಲಾಗುತ್ತಿದ್ದು, ಶುದ್ಧವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಹಾರ ಇತ್ಯಾದಿ ವ್ಯವಸ್ಥೆ ನೀಡಲಾಗುತ್ತಿದೆ ಎಂದರು.ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಮಾತನಾಡಿ ಬೆಂಗಳೂರು ನಗರ ಜಿಲ್ಲೆಯಿಂದ ಬರುವ ಸೋಂಕಿತರಿಗೆ ಆದ್ಯತೆ ನೀಡಲಾಗುತ್ತಿರುವ ಹಿನ್ನೆಲೆ, ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ.
ಶೇಕಡಾವಾರು ಹಾಸಿಗೆಯನ್ನು ಕಾಯ್ದಿರಿಸುವ ವ್ಯವಸ್ಥೆಯ ಬದಲು ಆರೋಗ್ಯದ ಸ್ಥಿತಿಗತಿಗಳನ್ನು ಪರಿಗಣಿಸಿ ಸ್ಥಳೀಯರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ರೆಮ್ಡಿಸಿವಿರ್ ಇಂಜೆಕ್ಷನ್, ಐಸಿಯು ಬೆಡ್ ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ, ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ತಹಶೀಲ್ದಾರ್ ಗೀತಾ ಸೇರಿದಂತೆ ಪೋಲಿಸ್ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…