ದೊಡ್ಡಬಳ್ಳಾಪುರ: ಕೋವಿಡ್-19 ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕಿಗೆ ಒಳಗಾಗುವ ಸೋಂಕಿತರಿಗೆ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ದೇಶಾದ್ಯಂತ ಮೇಕ್ ಶಿಫ್ಟ್(Make Shift) ಆಸ್ಪತ್ರೆಗಳನ್ನು ತೆರೆಯಲಾಗುತ್ತಿದ್ದು, ಕರ್ನಾಟಕ ರಾಜ್ಯಕ್ಕೆ ಅನುಮೋದನೆಯಾಗಿರುವ 20, 50, 100 ಹಾಸಿಗೆಗಳ ಮೂರು ಆಸ್ಪತ್ರೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ 100 ಆಕ್ಸಿಜನೇಟೆಡ್ ಬೆಡ್‌ಗಳ ಮೇಕ್ ಶಿಫ್ಟ್(Make Shift) ಆಸ್ಪತ್ರೆ ಒಂದಾಗಿರುವುದು ಹೆಮ್ಮೆಯ ವಿಷಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಪಿಂಡಕೂರುತಿಮ್ಮನಹಳ್ಳಿ ಗ್ರಾಮದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪಕ್ಕದಲ್ಲಿ 100 ಆಕ್ಸಿಜನೇಟೆಡ್ ಬೆಡ್‌ಗಳ ಮೇಕ್ ಶಿಫ್ಟ್(Make Shift) ಆಸ್ಪತ್ರೆಯ ಗುದ್ದಲಿ ಪೂಜೆ ಕಾರ್ಯವನ್ನು ಮೇ 31ರಂದು ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಬಿ.ಎನ್.ಬಚ್ಚೇಗೌಡ, ಶಾಸಕರಾದ ವೆಂಕಟರಮಣಯ್ಯ, ರವಿ ಅವರುಗಳ ಸಮ್ಮುಖದಲ್ಲಿ ನೆರವೇರಿಸಿದ್ದು, ಜೂನ್ ತಿಂಗಳ ಕೊನೆಯಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.
ಲೆನೆವೊ(Lenevo), ಗೋಲ್ಡ್ ಮ್ಯಾನ್ ಸ್ಯಾಚಸ್(Goldman sachs) ಕಂಪನಿಗಳು ಸಿ.ಎಸ್.ಆರ್ ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ (modulus) ಸಂಸ್ಥೆಯವರು ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು ರೂ. 4 ಕೋಟಿಗಳ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗುತ್ತಿದೆ.
ರಾಜ್ಯಗಳಲ್ಲಿ ಕೋವಿಡ್ ವಿಸ್ತರಿತ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ರಾಜ್ಯಗಳಿಗೆ ಸಹಾಯ ಮಾಡಲು ಐಐಟಿಎಂನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಮೂಲ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಪೋಷಿಸುವ ಸಲುವಾಗಿ ಸರ್ಕಾರದ ಪಿಎಸ್‌ಎ ಕಚೇರಿ ಹಾಗೂ ಮಾಡ್ಯುಲಸ್ ಹೌಸಿಂಗ್ ಆರಂಭಿಕ ಹೆಜ್ಜೆಯನ್ನಿಟ್ಟಿದೆ. ಮೆಡಿಕ್ಯಾಬ್ ನಕಾರಾತ್ಮಕ ಒತ್ತಡದ ಸನ್ನಿವೇಶದಲ್ಲಿಯೂ ಕಾರ್ಯನಿರ್ವಹಣೆ ಮಾಡಲಿದ್ದು, ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಇದು ಪೂರ್ವನಿರ್ಮಿತ ಮತ್ತು ಪೂರ್ವ ಪ್ರಾಮಾಣೀಕೃತ ರಚನೆಯಾಗಿದೆ.
ಮೆಡಿಕ್ಯಾಬ್‌ನಲ್ಲಿ ಆರೋಗ್ಯ ರಕ್ಷಕ ಕಾರ್ಯಕರ್ತರ ವಲಯ, ಸ್ಕ್ರೀನಿಂಗ್ ಮತ್ತು ವೀಕ್ಷಣಾ ವಲಯ, ಪ್ರತ್ಯೇಕ ವಾರ್ಡ್ ವಲಯ, ಐಸಿಯು ವಾರ್ಡ್ ವಲಯ ಎಂದು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ.
ಆಸ್ಪತ್ರೆಯಲ್ಲಿರುವ ಇಲೆಕ್ಟ್ರಿಕ್ ಸೌಲಭ್ಯಗಳು: ಎಲ್‌ಇಡಿ ಲೈಟ್‌ಗಳು – 2 x 2 ಅಡಿ – 40 ವ್ಯಾಟ್ಸ್, ಕ್ಯಾಬಿನ್ ಫ್ಯಾನ್‌ಗಳು -12 ಇಂಚ್ – 80 ವ್ಯಾಟ್ಸ್, ಎಕ್ಸಾಸ್ಟ್ ಫ್ಯಾನ್‌ಗಳು – 250 ಎಂಎಂ ಸ್ವೀಪ್ – 25 ವ್ಯಾಟ್ಸ್, ಸಾಕೆಟ್‌ಗಳು ಮತ್ತು ಪ್ಲಗ್ ಪಾಯಿಂಟ್‌ಗಳು -5 ಆ್ಯಂಪ್ ಮತ್ತು 15 ಆ್ಯಂಪ್ (ವೈದ್ಯಕೀಯ ಉಪಕರಣಗಳ ಪ್ಲಗಿನ್), ವಿತರಣಾ ಬಾಕ್ಸ್ – ಸಿಂಗಲ್ ಫೇಸ್ 32 ಆ್ಯಂಪ್ – ಎಂಸಿಬಿ, ಎಸಿ ಪ್ಲಗ್ ಪಾಯಿಂಟ್‌ಗಳು – ಜೊತೆಗೆ 40 ಆ್ಯಂಪ್‌ಗಳು, ಎಸಿ ಸ್ಟೆಬಿಲೈಜರ್‌ಗಳು ಇವೆ.
ವೆಸ್ಟರ್ನ್ ಕ್ಲೋಸೆಟ್- ಪ್ರತಿ ಶೌಚಾಲಯಕ್ಕೆ ತಲಾ 1, ವಾಶ್ ಬೇಸಿನ್ – ತಲಾ 1, ಎಕ್ಸಾಸ್ಟ್ ಫ್ಯಾನ್‌ಗಳು -150 ಎಂಎಂ ಸ್ವೀಪ್, ಬಿಸಿ ಮತ್ತು ತಣ್ಣೀರು ಸೌಲಭ್ಯದ ಶವರ್ ಹೆಡ್‌ಗಳು, ಬಿಸಿ ನೀರಿನ ಗೀಸರ್ – ತಲಾ 1 ಸೇರಿದಂತೆ ಶೌಚಾಲಯಗಳು ಮತ್ತು ಕೊಳಾಯಿ ವ್ಯವಸ್ಥೆಗಳ ಸೌಲಭ್ಯಗಳು ಇಲ್ಲಿವೆ.
ನಿರ್ಮಾಣ ಸ್ಥಳದ ಅಗತ್ಯತೆಗಳು: 30 ಎಂಪಿಸಿ ಗ್ರೇಡ್‌ನೊಂದಿಗೆ ನೆಲಮಟ್ಟದಿಂದ 9 ಇಂಚಿನಷ್ಟು ಗಟ್ಟಿಯಾದ ಮಣ್ಣು ಅಥವಾ ಪಿಸಿಸಿ ಬಳಕೆ ,15 ಅಡಿ ವ್ಯಾಪ್ತಿಯೊಳಗೆ ವಿದ್ಯುತ್ ಸಂಪರ್ಕ ಸೌಲಭ್ಯ, 15 ಅಡಿ ವ್ಯಾಪ್ತಿಯೊಳಗೆ ನೀರಿನ ಸಂಪರ್ಕ ಸೌಲಭ್ಯ, ಒಳಚರಂಡಿ ವ್ಯವಸ್ಥೆಯ ಲಭ್ಯತೆ, ತೆರೆದ ಮೈದಾನ, 40 ಎಫ್‌ಟಿ ಟ್ರೈಲರ್ , 5 ಟಿ ಕ್ರೇನ್ ಸುಲಭ ಚಲನೆಗೆ ಸ್ಥಳಾವಕಾಶ.
ಈ ಆಸ್ಪತ್ರೆಯು 70 ಆಕ್ಸಿಜನ್ ಬೆಡ್‌ಗಳು, 20 ಐ.ಸಿ.ಯು (ತೀವ್ರ ನಿಗಾ ಘಟಕ) ಬೆಡ್‌ಗಳು, 10 ವೆಂಟಿಲೇಟರ್ ಬೆಡ್‌ಗಳು ಹಾಗೂ 2 ಕೆ.ಎಲ್ ಆಕ್ಸಿಜನ್ ಜನರೇಟರ್ ವ್ಯವಸ್ಥೆಯನ್ನು ಹೊಂದಿರಲಿದ್ದು, ಈ ಆಸ್ಪತ್ರೆಯ ಲೇಔಟ್ ನಿರ್ಮಾಣ ಕಾಮಗಾರಿಯನ್ನು ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್, ದೊಡ್ಡಬಳ್ಳಾಪುರ ಇವರು ನಿರ್ವಹಿಸಿರುತ್ತಾರೆ.
ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಭಾರತ ಸರ್ಕಾರ, ಅಮೆರಿಕನ್ ಇಂಡಿಯಾ ಫೌಂಡೇಶನ್ ಮತ್ತು ಯು.ಎನ್.ಡಿ.ಪಿ(UNDP) ಸಂಸ್ಥೆಗೆ ವಹಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….