ದೊಡ್ಡಬಳ್ಳಾಪುರ: ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸಿ ಮೋಸಕ್ಕೆ ಒಳಗಾಗಿದ್ದೇವೆ. ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ತಮ್ಮ ಗೆಲುವಿಗಾಗಿ ಮಾತ್ರ ನಮ್ಮ ಪಕ್ಷವನ್ನು ಬಳಸಿಕೊಂಡರು. ಆದರೆ ನಗರಸಭೆ ಚುನಾವಣೆ ಸಂದರ್ಭದಲ್ಲಿ ಮಾತಿಗೆ ತಪ್ಪಿ ನಡೆದುಕೊಂಡರು. ಇದರ ಪರಿಣಾಮವೇ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ವಂಚಿತವಾಗಲು ಕಾರಣವಾಯಿತು ಎಂದು ಕನ್ನಡ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸಂಜೀವ್ ನಾಯಕ್ ಆರೋಪಿಸಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 80ರ ದಶಕದಲ್ಲಿ ಡಾ.ವೆಂಕಟರೆಡ್ಡಿ ಅವರು ನೇತೃತ್ವದಲ್ಲಿ ಸ್ಥಾಪನೆಯಾದ ಕನ್ನಡ ಪಕ್ಷದ ಪ್ರತಿಬಾರಿಯ ನಗರಸಭೆ ಚುನಾವಣೆಯಲ್ಲೂ ಕನಿಷ್ಠ ಇಬ್ಬರಿಂದ ನಾಲ್ಕು ಜನ ಸದಸ್ಯರು ಆಯ್ಕೆಯಾಗುತ್ತಿದ್ದರು.ಆದರೆ ಶಾಸಕರು ಸ್ಥಾನ ಹೊಂದಾಣಿಕೆಯಲ್ಲಿ ಮಾಡಿದ ಮೋಸದಿಂದಾಗಿಯೇ ನಮ್ಮ ಪಕ್ಷ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಸೋಲುಕಾಣಲು ಕಾರಣವಾಯಿತು. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ಸದಸ್ಯರು ಸೋಲುವಂತೆ ಮಾಡುವ ಮೂಲಕ ನಮ್ಮ ಶಕ್ತಿಯನ್ನು ತೋರಿಸಿದ್ದೇವೆ ಎಂದರು.
ಕನ್ನಡ ಪಕ್ಷವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸದೃಢಗೊಳಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ನೂತನ ಹಾಗೂ ಯುವಕರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲು ಜೂನ್ 20 ರಂದು ಸಂಜೆ 4 ಗಂಟೆಗೆ ನಗರದ ಕನ್ನಡ ಜಾಗೃತ ಭವನದಲ್ಲಿ ಸಭೆ ನಡೆಯಲಿದೆ.
ನಾಡಿನ ಜಲ,ನೆಲ, ಭಾಷೆ ಹಾಗೂ ತುಳಿತಕ್ಕೆ ಒಳಗಾದವರ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ಪಕ್ಷದಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಲು ಮುಕ್ತ ಅವಕಾಶ ಇದೆ ಎಂದರು.
ಕನ್ನಡ ಪಕ್ಷದ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮಾತನಾಡಿ, ನಗರಸಭೆ ಸಭೆ ಚುನಾವಣೆಯಲ್ಲಿ ಕನ್ನಡ ಪಕ್ಷ ಇದೇ ಪ್ರಥಮ ಬಾರಿಗೆ ಸೋಲು ಕಂಡಿದೆ. ಆದರೆ ನಮ್ಮದು ಅಧಿಕಾರಕ್ಕಾಗಿ ಮಾತ್ರ ಇರುವ ಪಕ್ಷ ಅಲ್ಲ. ಸದಾ ದುಡಿಯುವ ವರ್ಗದ ಹಿತಕ್ಕಾಗಿ ಇರುವ ಪಕ್ಷವಾಗಿದೆ. ಹೀಗಾಗಿ ನಮ್ಮ ಪಕ್ಷ ಅನ್ಯಾಯದ ವಿರುದ್ಧ ಸದಾ ಹೋರಾವನ್ನು ಮುಂದುವರೆಸಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಸತೀಶ್, ವೆಂಕಟೇಶ್, ಮಂಜುನಾಥ್, ನಾರಾಯಣಸ್ವಾಮಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

