ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರ ಘೋಷಣೆ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.
ನಗರ ಹೊರವಲಯದ ತಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಬಿಜೆಪಿ ಜನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತ ಸಭೆಯ ನಂತರ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಿಲ್ಲಾ ಕೇಂದ್ರದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ನೀಡಿರುವ ಹೇಳಿಕೆ ನೀಡಿರಬಹುದು. ಆದರೆ ಆ ಬಗ್ಗೆ ಎಲ್ಲೂ ಚರ್ಚೆ ನಡೆದಿಲ್ಲ. ಸರ್ಕಾರದಲ್ಲಿ ಚರ್ಚಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರ ಆಗಬೇಕೇ ಅಥವಾ ದೇವನಹಳ್ಳಿ ಆಗಬೇಕೆ ಎಂಬುದನ್ನು ತೀರ್ಮಾನಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಸಾವರ್ಕರ್ ಪೋಟೋ ಹಿಡಿದು ಬಿಜೆಪಿ ರಾಜಕೀಯ ಮಾಡ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿರೋಧ ಪಕ್ಷವಾಗಿ ಟೀಕೆ ಮಾಡುವುದು ಅವರ ಕೆಲಸ. ಅವರು ಹೇಳೋದನ್ನು ಅವರು ಹೇಳ್ತಾರೆ ನಾವು ಹೇಳೋದನ್ನು ನಾವು ಹೇಳುತ್ತೀವಿ. ಯಾರು ಏನೇ ಹೇಳಿದರೂ ಅಂತಿಮ ತೀರ್ಮಾನ ಜನರಿಗೆ ಸೇರಿದ್ದು. ಮುಂದಿನ ಚುನಾವಣೆಯಲ್ಲಿ ಜನರೇ ಭವಿಷ್ಯ ಬರೆಯಲಿದ್ದಾರೆ ಎಂದು ಹೇಳಿದರು.
ಸೆಪ್ಟೆಂಬರ್ 8 ರಂದು ನಡೆಯುವ ಜನೋತ್ಸವ ಯಶಸ್ವಿಗೊಳಿಸುವ ಕುರಿತು ಚರ್ಚಿಸಲು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಜಿಲ್ಲಾ,ತಾಲ್ಲೂಕು ಮುಖಂಡರ ಪೂರ್ವಸಿದ್ಧತೆ ಸಭೆ ನಡೆಸಲಾಗಿದೆ. ಪ್ರತಿ ತಾಲ್ಲೂಕಿನ ಮುಖಂಡರ ಸಲಹೆಗಳನ್ನು ಸ್ವೀಕರಿಸಲಾಗಿದೆ. ಜನೋತ್ಸವಕ್ಕೆ ಒಟ್ಟು ಎರಡು ಲಕ್ಷ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಸಲುವಾಗಿ ಗ್ರಾಮ ಮಟ್ಟದ ಪ್ರತಿ ಬೂತ್, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯಕ್ಕೆ ಸಂದೇಶ ರವಾನಿಸಬೇಕು ಎಂದು ಹೇಳಿದರು.
ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸೆ.8ರಂದು ಜನೋತ್ಸವಕ್ಕೆ ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಚರ್ಚಿಸಲಾಗಿದೆ. ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಪೂರ್ವಸಿದ್ದತೆ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್,ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಮುಖಂಡರಾದ ಪುಷ್ಪಾಶಿವಶಂಕರ್, ಲೀಲಾಮಹೇಶ್, ಧೀರಜ್ ಮುನಿರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಸೇರಿದಂತೆ ಬಿಜೆಪಿ ವಿವಿಧ ಘಟಕಗಳ ಮುಂಚೂಣಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….