ದೊಡ್ಡಬಳ್ಳಾಪುರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರ್ಥಿಕ ನೆರವು ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ರೈತರ ನಿರುತ್ಸಾಹದಿಂದ ಯೋಜನೆ ಕೈತಪ್ಪುವ ಆತಂಕ ಅಧಿಕಾರಿಗಳನ್ನು ಸಂಕಷ್ಟಕ್ಕೆದೂಡಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಇ-ಕೆವೈಸಿ ಮಾಡಿಸುವಂತೆ ಸತತ ಪ್ರಚಾರ ನೀಡಿದರು, ರೈತರು ಸ್ಪಂದಿಸುತ್ತಿಲ್ಲ. ಯೋಜನೆಯಿಂದ ರೈತರು ಕೈ ತಪ್ಪಬಾರದೆಂದು ಪದೇ ಪದೇ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅಲ್ಲದೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಶನಿವಾರ ಮತ್ತು ಭಾನುವಾರ ಇ-ಕೆವೈಸಿ ಮಾಡಿಸಲು ಗ್ರಾಮಪಂಚಾಯಿತಿ ಮಟ್ಟದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳು ಶೇ.51ರಷ್ಟು ಇ-ಕೆವೈಸಿ ನೋಂದಣಿ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 25763 ನೋಂದಣಿಯಾಗಿದ್ದಾರೆ. ಆಗಸ್ಟ್ 29ರ ವರದಿಯಂತೆ 13192 ಮಂದಿ ರೈತರು ಇ-ಕೆವೈಸಿ ಮಾಡಿಸಿದ್ದು, ಬಾಕಿ 12571 ರೈತರ ನೋಂದಣಿ ಮಾಡಿಸಲು ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.
ಆಗಸ್ಟ್ 30 ಮತ್ತು 31 ಗೌರಿ-ಗಣೇಶ ಹಬ್ಬ ಇರುವುದರಿಂದ ನೋಂದಣಿಗೆ ಬಹುತೇಕ ಇಂದೇ ಇ-ಕೆವೈಸಿ ಮಾಡಿಸಲು ಕಡೆಯ ದಿನವಾಗಿದೆ. ಇಲ್ಲವಾದಲ್ಲಿ ಸರ್ಕಾರದಿಂದ ರೈತರ ಖಾತೆ ಬರುವ ಪ್ರೋತ್ಸಾಹ ಧನ ನಿಲ್ಲಲಿದ್ದು, ರೈತರು ಸೌಲಭ್ಯ ವಂಚಿತರಾಗದಂತೆ ಇ-ಕೆವೈಸಿ ಮಾಡಿಸಲು ಕೃಷಿ ಇಲಾಖೆ ಅಧಿಕಾರಿಗಳು ಹಗಲು – ರಾತ್ರಿ ಶ್ರಮಿಸುತ್ತಿದ್ದಾರೆ.
ಇ-ಕೆವೈಸಿ ಮಾಡಿಸಲು ರೈತರು ಕೇಂದ್ರ ಸರ್ಕಾರದ ಜಾಲ ತಾಣವಾದ https://pmkisan.gov.in/ ಪೋರ್ಟಲ್‍ನ ಪಾರಮರ್ ಕಾರ್ನರ್‍ನ ಇ-ಕೆವೈಸಿ ಅವಕಾಶದಡಿ ರೈತನ (ಫಲಾನುಭವಿ) ಆಧಾರ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ ಸಂಖ್ಯೆ ಯೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕಿದೆ.
ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾವ ಮೊಬೈಲ್ ಸಂಖ್ಯೆಗೆ ಇ-ಕೆವೈಸಿಗಾಗಿ ಕಳುಹಿಸಿದ ಓಟಿಪಿಯು ಸ್ವೀಕೃತವಾಗಿರುವುದಿಲ್ಲವೋ ಅಂತಹ ಫಲಾನುಭವಿಗಳು ಸಮೀಪದ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಬಯೋ ಮೆಟ್ರಿಕ್ ಯಂತ್ರದ ಮೂಖಾಂತರ ಇ-ಕೆವೈಸಿ ಮಾಡಿಸಬಹುದಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….