ದೊಡ್ಡಬಳ್ಳಾಪುರ: ಹಚ್ಚ ಹಸಿರಿನ ರಾಗಿ ಹೊಲದ ಪೈರುಗಳ ನಡುವೆ ಬಣ್ಣ ಬಣ್ಣದ ಹೂವುಗಳಿಂದ ಶೃಂಗರಿಸಿದ ಹೂವಿನ ಆರತಿಗಳನ್ನು ಹೊತ್ತ ಮಹಿಳೆಯರು, ತಮಟೆ ವಾದ್ಯಗಳೊಂದಿಗೆ ಸಾಗಿ ಬರುತ್ತಿದ್ದ ದೃಶ್ಯ ನೋಡುಗರ ಕಣ್ಣುಗಳಿಗೆ ಹಬ್ಬವನ್ನು ಉಂಟುಮಾಡಿತ್ತು.
ಈ ದೃಶ್ಯ ಕಂಡು ಬಂದಿದ್ದು ಸೋಮವಾರ ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿ ಸಮೀಪದ ದಿನ್ನೆ ಬಯಲು ಬಸವಣ್ಣ ದೇವಾಲಯ ಬಯಲಿನಲ್ಲಿ.
ಪುರಾತನ ದಿನ್ನೆ ಬಯಲು ಬಸವಣ್ಣ ದೇವರಿಗೆ ಎಸ್.ಎಂ.ಗೊಲ್ಲಹಳ್ಳಿ ಗ್ರಾಮದ ಮಹಿಳೆಯರು ಶ್ರದ್ದಾಭಕ್ತಿಗಳಿಂದ ಹೂವಿನ ಆರತಿಗಳನ್ನು ಬೆಳಗಿ ಧನ್ಯತೆ ಮೆರೆದರು. ಸಂಜೆ ನಡೆದ ಆರತಿಗಳ ಉತ್ಸವದಲ್ಲಿ ಅರಳುಮಲ್ಲಿಗೆ, ಏಕಾಶಿಪುರ, ಕುಂಟನಹಳ್ಳಿ, ಗೆಜ್ಜಗದಹಳ್ಳಿ, ಬೈರಸಂದ್ರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು.
ಆರತಿಗಳ ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗು ಹಚ್ಚಹಸಿರಿನ ಪ್ರಕೃತಿ ನಡುವಿನ ಬಯಲಿನಲ್ಲಿಯೇ ಅನ್ನಸಂತರ್ಪಣೆ ನಡೆಯಿತು.
ಇಲ್ಲಿನ ವಿಶೇಷವೆಂದರೆ ನಂದಿ(ಬಸವಣ್ಣ)ಮೂರ್ತಿ ಬಯಲಿನಲ್ಲೇ ಇರುವುದು. ನೂರಾರು ವರ್ಷಗಳಿಂದಲು ಇಲ್ಲಿನ ಮೂರ್ತಿಗೆ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಹಲವಾರು ಬಾರಿ ಭಕ್ತಾಧಿಗಳು ಕಟ್ಟಡ ನಿರ್ಮಿಸಲು ಪ್ರಯತ್ನಿಸಿದ್ದರು ಸಹ ಕಟ್ಟಡದ ಗೋಡೆ ಬಿದ್ದು ಹೋಗಿದೆ. ಹೀಗಾಗಿಯೇ ಇಂದಿಗೂ ಬವಣ್ಣನ ಮೂರ್ತಿಯ ಸುತ್ತ ಯಾವುದೇ ಕಟ್ಟಡವು ಇಲ್ಲ ಎನ್ನುತ್ತಾರೆ ಅರ್ಚಕರಾದ ನಾಗರಾಜ್.
ರೈತರು ತಮ್ಮ ಮನೆಗಳಲ್ಲಿ ಹಸು ಕರು ಹಾಕಿದ ಒಂದು ವಾರದ ನಂತರ ಬೆಣ್ಣೆ, ಹಾಲಿನೊಂದಿಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ರಾಸುಗಳ ಏಳಿಗೆಗಾಗಿ ಪ್ರಾರ್ಥಿಸುವ ವಾಡಿಕೆ ನಡೆದುಕೊಂಡು ಬಂದಿದೆ.
ಯಾವುದೇ ಶುಭಕಾರ್ಯವನ್ನು ಮಾಡುವ ಮುನ್ನ ಅಥವಾ ಕಷ್ಟಗಳು ಬಂದಾಗ ಇಲ್ಲಿ ಪೂಜೆ ಸಲ್ಲಿಸಿ ಬಸವಣ್ಣ ದೇವರಿಂದ ಹೂವು ಬೇಡುವ ಪದ್ದತಿ ನೂರಾರು ವರ್ಷಗಳಿಂದಲು ನಡೆಯುತ್ತಿದೆ.
ಸೋಮವಾರ ಒಂದು ದಿನ ಮಾತ್ರ ಇಲ್ಲಿ ಪೂಜೆಗಳು ನಡೆಯುತ್ತವೆ. ವಾರದ ಇತರೆ ದಿನಗಳಲ್ಲಿ ಇಲ್ಲಿಗೆ ಭಕ್ತಾಧಿಗಳು ಬರುವುದು ಅಪರೂಪ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….