ದೊಡ್ಡಬಳ್ಳಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಟಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ವಿದ್ಯಾರ್ಥಿಗಳು ತಯಾರಿಸಿದ್ದ ರಾಕೆಟ್ ಉಡಾವಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ, ಮಕ್ಕಳು ಚಿಕ್ಕಂದಿನಿಂದಲೇ ವೈಜ್ಞಾನಿಕ ಮನೋಬಾವ ರೂಢಿಸಿಕೊಳ್ಳಬೇಕಿದೆ. ವಿಜ್ಞಾನ ಮನಮುಟ್ಟುವಂತೆ ಮಾಡಲು ಪ್ರಾಯೋಗಿಕ ಶಿಕ್ಷಣ ಹಾಗೂ ಚಟುವಟಿಕೆಗಳು ಪೂರಕವಾಗಿದ್ದು, ಈ ದಿಸೆಯಲ್ಲಿ ವಿಜ್ಞಾನಕ್ಕೆ ಸಂಬಂಸಿದ ವಿಚಾರಗೋಷ್ಟಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಗಳು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳಸಿಕೊಳ್ಳಲು ಇಂಬು ನೀಡುತ್ತವೆ ಎಂದರು.
ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ, ಮೌಢ್ಯವನ್ನು ಅಪ್ಪಿಕೊಂಡು ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಬದಲು ವಿಜ್ಞಾನದ ವಿಚಾರಗಳನ್ನು ಅರಿತರೆ ನಮ್ಮ ಬದುಕಿಗೆ ದಾರಿದೀಪವಾಗುತ್ತದೆ ಎಂದ ಅವರು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಕುಟುಂಬದವರು ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಿಕೊಟ್ಟಿರುವುದನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಾಜಘಟ್ಟದ ಮಾರುತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮುರಳಿ ಮೋಹನ್, ಇಸಿಓ ಬಿ.ಎಚ್.ಮೂರ್ತಿ, ಬಿಆರ್‍ಪಿ ಹನುಮಂತರಾಯಪ್ಪ, ಸಿಆರ್‍ಪಿ ಲೋಕೇಶ್ ಮೂರ್ತಿ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….