ಬೆಂ.ಗ್ರಾ.ಜಿಲ್ಲೆ: ಸೆಪ್ಟೆಂಬರ್-2022ರ ಮಾಹೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಹಿನ್ನೆಲೆ 31 ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮೊದಲನೇ ಬಾರಿಗೆ ಪ್ರಥಮ ಶ್ರೇಯಾಂಕವನ್ನು ಪಡೆದಿದೆ.
ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ಅಹವಾಲು ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯ ಸೆಪ್ಟೆಂಬರ್ 2022ರ ಮಾಹೆಯ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು ಎಲ್ಲಾ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2022ರ ಸೆಪ್ಟೆಂಬರ್ ಮಾಹೆಯಲ್ಲಿ ಒಟ್ಟು 70,476 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿ, ಈ ಪೈಕಿ 69,036 ಅರ್ಜಿಗಳನ್ನು ಸಕಾಲ ನಿಯಮಗಳನ್ವಯ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 2909 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ. 29 ಅರ್ಜಿಗಳು ವಿಲೇವಾರಿಯಾಗುವುದು ಬಾಕಿಯಿದೆ.
ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಜೊತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿಯಾಗಿದೆ.
ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ ಕುರಿತಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ರ್ಯಾಂಕಿಂಗ್ ಪಟ್ಟಿ ಪ್ರಕಟಿಸುತ್ತದೆ. ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಕಾಲ ಮಿತಿಯಲ್ಲಿ ಕಡತ ವಿಲೇವಾರಿಯಾಗಬೇಕು ಹಾಗೂ ನಾಗರೀಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರದ ಸೇವೆಗಳು ಲಭ್ಯವಾಗಲಿವೆ.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸಕಾಲ ಯೋಜನೆ ಆರಂಭವಾದಾಗಿನಿಂದ(2012 ರಿಂದ ಈ ವರೆಗೆ) ಈ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲಿಯೇ 01 ಬಾರಿ (ಮಾಹೆ) ಪ್ರಥಮ ಸ್ಥಾನ ಗಳಿಸಿದೆ. 02 ಬಾರಿ ದ್ವಿತೀಯ ಹಾಗೂ 03 ಬಾರಿ ತೃತೀಯ ಸ್ಥಾನ ಗಳಿಸಿದೆ.
ಜಿಲ್ಲಾಧಿಕಾರಿ ಹರ್ಷ: “ಇಂದು ನಾಳೆ ಇನ್ನಿಲ್ಲ. ಹೇಳಿದ ಸಮಯ(ದಿನ) ತಪ್ಪೋಲ್ಲ” ಎಂಬ ಸಕಾಲ ಯೋಜನೆಯ ಧ್ಯೇಯವಾಕ್ಯದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಸೇವೆ ನೀಡುವಲ್ಲಿ ಸಹಕಾರಿಯಾಗಿ ನಿಂತಿದೆ. ಈ ಅಭೂತಪೂರ್ವ ಸಾಧನೆಗೆ ಸಹಕಾರ ನೀಡಿದ ಹಾಗೂ ಅಹರ್ನಿಶಿ ಶ್ರಮಿಸಿದ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿಯೂ ತಾವೆಲ್ಲರೂ ತಮ್ಮ ಕಾರ್ಯ ವೈಖರಿಯನ್ನು ಹೀಗೆಯೇ ಯಶಸ್ವಿಯಾಗಿ ನಿರ್ವಹಿಸಿ ಪ್ರಥಮ ಸ್ಥಾನವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಈ ಸಾಧನೆಗೆ ಕೈಜೋಡಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಸ್ತ ಜನತೆಗೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಕಾಲ ಯೋಜನೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ನಿರಂತರವಾಗಿ ಸೂಕ್ತ ನಿರ್ದೇಶನ ನೀಡಿದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿರುವುದು ಜಿಲ್ಲಾಧಿಕಾರಿ ಆರ್.ಲತಾ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆಗಿದ್ದ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಸಕಾಲ ಯೋಜನೆಯ ದಶಮಾನೋತ್ಸವ ಸಂದರ್ಭದಲ್ಲಿ ಸಕಾಲ ಸಚಿವರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದ ಪ್ರಶಂಸಾ ಪತ್ರ ಪಡೆದಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….