ದೊಡ್ಡಬಳ್ಳಾಪುರ: ರೈತನ ಮನೆಯಿಂದ ಹೊರಬರದಂತೆ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ ಕದೀಮರು, ದೊಡ್ಡಿಯಲ್ಲಿದ್ದ ಕುರಿ-ಮೇಕೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಡೋನಹಳ್ಳಿ ಗ್ರಾಮದ ಕೆವಿಕೆ ಕೇಂದ್ರದ ಸಮೀಪದ ಜಮೀನಿನಲ್ಲಿ ಸುಬ್ರಮಣಿ ಎನ್ನುವವರು ಮನೆ ಮಾಡಿಕೊಂಡಿದ್ದಾರೆ. ವ್ಯವಸಾಯದ ಜೊತೆಗೆ ಕುರಿ-ಮೇಕೆಗಳನ್ನು ಸಾಕುವುದನ್ನು ಸುಬ್ರಮಣಿ ಕುಟುಂಬ ಉಪಕಸುಬಾಗಿಸಿಕೊಂಡಿದ್ದಾರೆ.
ಆದರೆ ಗುರುವಾರ ರಾತ್ರಿ ದುಷ್ಕರ್ಮಿಗಳು ಇವರ ಮನೆಯ ಬಾಗಿಲಿಗೆ ಹೊರಗಿಂದ ಚಿಲಕ ಹಾಕಿ ದೊಡ್ಡಿಯಲ್ಲಿದ್ದ 20 ಕುರಿ – ಮೇಕೆ ದೋಚಿಕೊಂಡು ಪರಾರಿಯಾಗಿದ್ದಾರೆ. ಅಲ್ಲದೆ ಚಿಕ್ಕ ಮರಿಗಳನ್ನು ಬಿಟ್ಟು ದೊಡ್ಡ ದೊಡ್ಡ ಕುರಿ-ಮೇಕೆಗಳನ್ನೇ ಆಯ್ದುಕೊಂಡು ಕಳ್ಳರು ಜಾಣ್ಮೆ ತೋರಿದ್ದಾರೆ.
ಇದೇ ತೂಬಗೆರೆ ಹೋಬಳಿ ವ್ಯಾಪ್ತಿಯ ರಾಜಘಟ್ಟ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ಕ್ವಾಲೀಸ್ ಕಾರಲ್ಲಿ ಬಂದು ಇದೇ ರೀತಿ ಕುರಿಗಳನ್ನು ದೋಚಿ ಪರಾರಿಯಾಗಿದ್ದರು. ಅದೇ ರೀತಿಯ ಘಟನೆ ಮತ್ತೆ ಸಂಭವಿಸಿರುವುದು ಈ ವ್ಯಾಪ್ತಿಯ ರೈತರನ್ನು ಆತಂಕಕ್ಕೆ ದೂಡಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

