ದೊಡ್ಡಬಳ್ಳಾಪುರ: ತಾಲೂಕಿನ ಕೋಡಿಹಳ್ಳಿಯಲ್ಲಿ ಕುರಿಗಳ ಕಳವು ಮಾಡಿರುವ ಕಳ್ಳರು, ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಚಂದ್ರಪ್ಪ ಎನ್ನುವವರ ಕುರಿ ದೊಡ್ಡಿಗೆ ನುಗ್ಗಿರುವ ಕಳ್ಳರು, 20 ಕುರಿಗಳನ್ನು ಕದ್ದು ಪರಾರಿಯಾಗಿದ್ದಾರೆ. ಆದರೆ ಅಲ್ಲೆ ಇದ್ದ ಎರಡು ಮೇಕೆ ಮತ್ತು ಐದು ಕುರಿ ಮರಿಗಳನ್ನು ಬಿಟ್ಟು ತೆರಳಿದ್ದಾರೆ.

ಕಳವು ಮಾಡುವುದಕ್ಕೆ ಮುನ್ನ ರೈತ ಚಂದ್ರಪ್ಪರ ಮನೆ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದು, ನಂತರ ಕಳವು ಮಾಡಿದ್ದಾರೆ. ರಾತ್ರಿ 12ಗಂಟೆ ವೇಳೆಗೆ ಮನೆಯಿಂದ ಹೊರಬರಲು ಮುಂದಾದ ಚಂದ್ರಪ್ಪರಿಗೆ ಚಿಲಕ ಹಾಕಿರುವುದು ಗಮನಕ್ಕೆ ಬಂದಿದೆ. ಪಕ್ಕದ ಮನೆಯಲ್ಲಿನ ಸಂಬಂಧಿಕರಿಗೆ ಕರೆ ಮಾಡಿ, ಬಾಗಿಲು ತೆಗೆಸಿ ನೋಡಿದಾಗ ಕುರಿ ಕಳುವಾಗಿರುವುದು ಬೆಳಕಿಗೆ ಬಂದಿದೆ.
ತಾಲೂಕಿನಲ್ಲಿ ಕುರಿಗಳ ಕಳವು ಪ್ರಕರಣ ತೀವ್ರಗೊಳ್ಳುತ್ತಿದ್ದು, ಕಳೆದೊಂದು ವಾರದಲ್ಲಿ ಮೂರು ಕಡೆಗಳಲ್ಲಿ ಕುರಿ-ಮೇಕೆಗಳ ಕಳ್ಳತನ ನಡೆದಿರುವುದು ವರದಿಯಾಗಿದೆ.
ಕಳೆದ ಭಾನುವಾರ ಸೋಣ್ಣಮಾರನಹಳ್ಳಿಯಲ್ಲಿ 20 ಕುರಿ – ಮೇಕೆ, ಶುಕ್ರವಾರ ಹಾಡೋನಹಳ್ಳಿಯಲ್ಲಿ ಕುರಿ-ಮೇಕೆಗಳ 20 ಕಳವು ಹಾಗೂ ಅದೇ ರೀತಿ ಶನಿವಾರ ರಾತ್ರಿ ಕೋಡಿಹಳ್ಳಿಯಲ್ಲಿ ಕಳವು ರೈತರಲ್ಲಿ ಆತಂಕ ಹೆಚ್ಚು ಮಾಡಿದೆ.
ಪರಿಹಾರಕ್ಕೆ ಆಗ್ರಹ: ತಾಲೂಕಿನಲ್ಲಿ ಪದೇ ಪದೇ ಕಳವು ಪ್ರಕರಣ ನಡೆಯುತ್ತಿದ್ದು, ಪೊಲೀಸ್ ಇಲಾಖೆ ತ್ವರಿತ ಕ್ರಮದ ಜೊತೆಗೆ, ತಾಲೂಕು ಆಡಳಿತ ಕಳ್ಳತನದಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡಬೇಕೆಂದು ಕರವೇ ಮುಖಂಡ ರಾಜಘಟ್ಟರವಿ ಆಗ್ರಹಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
