ಹಿಂದೆ ಬ್ರಾಹ್ಮಣನ ಪತ್ನಿಯಾದ ಅಂಬಿಕೆಗೆ ಮೂರ್ಖ ಮಗನೊಬ್ಬ ಜನಿಸಿ ಟೀಕೆಗಳಿಗೆ ಗುರಿಯಾಗಿದ್ದಳು. ಅವಳು ಮಗನೊಂದಿಗೆ ಕೃಷ್ಣಾ ನದಿಗೆ ಹಾರಲು ಹೊರಟಾಗ ಶ್ರೀ ಪಾದ ಗುರುಗಳು ಅಲ್ಲಿಗೆ ಬಂದು ಅವಳ ದುಃಖವನ್ನು ಕೇಳಿ ಪರಿಹರಿಸಿದರು ಹಾಗೂ ಆ ಹುಡುಗನಿಗೆ ಜ್ಞಾನೋಪದೇಶವನ್ನು ಮಾಡಿದ್ದರು.
ಆ ಸಮಯದಲ್ಲಿ ಅಂಬಿಕೆ ಗುರುಗಳ ಪಾದಾರವಿಂದಕ್ಕೆ ಬಿದ್ದು, ದುಃಖದಿಂದ ಗುರುದೇವ, ಭಕ್ತ ವತ್ಸಲ ನಮ್ಮನ್ನು ಈ ಕಷ್ಟದಿಂದ ಪಾರು ಮಾಡು.
ಎಷ್ಟೆಲ್ಲಾ ವ್ರಥ- ಉಪವಾಸಗಳನ್ನು ಮಾಡಿ ಹುಟ್ಟಿದ ಈ ಮಗನು ಮಂದಮತಿಯಾಗಿ ಸಮಾಜದ ನಿಂದನಿಗೆ ಗುರಿಯಾದೆವು, ಹೇ ದಯಾ ಸಮುದ್ರ, ದೈನ್ಯಹರ, ನಿನ್ನ ಚರಣಗಳಲ್ಲಿ ಬಿದ್ದಿದ್ದೇನೆ ನನ್ನನ್ನು ಅನುಗ್ರಹಿಸು ತಂದೆ ನನ್ನ ಪೂರ್ವ ಜನ್ಮದ ಪುಣ್ಯದಿಂದಲೇ ನಿಮ್ಮ ದರ್ಶನವಾಗಿದೆ. ಈ ಜನ್ಮದಲ್ಲಿ ಹುಟ್ಟಿದ ನಾನು ಬಹು ಕಷ್ಟದಿನಗಳನ್ನು ಅನುಭವಿಸಿ ಬಹಳ ನೂಂದಿದ್ದೇನೆ. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನಂತಹ ಪುತ್ರ ಹುಟ್ಟುವಂತೆ ಆಶೀರ್ವದಿಸು. ಎಲ್ಲರಿಂದ ಪಾದಾಭಿ ವಂದನೆಗಳನ್ನು ಸ್ವೀಕರಿಸುವ ಸುಪುತ್ರನಾಗಲೆಂದು ನನ್ನನ್ನು ಹರಸು ಎಂದು ಆರ್ಥಳಾಗಿ ಪ್ರಾರ್ಥಿಸಿ, ಶ್ರೀಪಾದಚರಣಗಳಲ್ಲಿ ಶಿರಭಾಗಿದಳು.
ಅಂಬಿಕೆಯ ಮಾತನ್ನು ಕೇಳಿದ ಶ್ರೀಪಾದರು, “ನೀನು ಈಶ್ವರಾರಾಧನೆ ಮಾಡು. ಶ್ರೀ ಹರಿಯಂತಹ ಪುತ್ರ ನಿನಗೆ ಜನಿಸುತ್ತಾನೆ. ಹಿಂದೆ ಗೋಪಿಕೆ ವ್ರತ ಮಾಡಿದ್ದರಿಂದಲೇ ಗೋಪ ಗೃಹದಲ್ಲಿ ಕೃಷ್ಣನು ಜನಿಸಿದನು. ಹಾಗೆ ನೀನು ಶಿವರಾಧನೆ ಮಾಡುವುದರಿಂದ ನಿನಗೆ ಸುಪುತ್ರನು, ಪ್ರಾಜ್ಞನಾದ ಪುತ್ರನು ಜನಿಸುತ್ತಾನೆ” ಎಂದು ಅಭಯ ನೀಡಿದರು.
ಗುರುಗಳ ಮಾತಿನಂತೆ ಅಂಬಿಕೆ ಚಂದ್ರಮೌಳಿಯನ್ನು ಪೂಜಿಸಿದಳು. ಪ್ರದೋಷ ಸಮಯದಲ್ಲಿ ಈಶ್ವರಾರ್ಚನೆ ಯನ್ನು ನೋಡಿದ ಮಾತ್ರಕ್ಕೆ ಕೃಷ್ಣನನ್ನು ಮಗನಾಗಿ ಪಡೆದ ಗೋಪಿಕೆ ಜನ್ಮ ಧನ್ಯ. ಸ್ವಾಮಿ ನನಗೆ ಆ ಕಥೆಯನ್ನು ಹೇಳಿ ಎಂದು ಅಂಬಿಕೆ ಕೇಳಿದಳು.
ಸ್ಕಂದ ಪುರಾಣದಲ್ಲಿ ಈ ಕಥೆ ಉಲ್ಲೇಖವಿದೆ. ಪುರಾಣದಲ್ಲಿ ಉಜ್ಜಯಿನಿ ಎಂಬ ಸುಂದರವಾದ ನಗರವಿತ್ತು. ಅಲ್ಲಿ ಧಾರ್ಮಿಕನಾದ ಚಿತ್ರಸೇನನೆಂಬ ರಾಜನಿದ್ದನು. ಅವನಿಗೆ ಈಶ್ವರ ಭಕ್ತಿ ಸಂಪನ್ನನಾದ ಮಣಿಭದ್ರನೆಂಬ ಮಿತ್ರ ನಿದ್ದನು. ಈತನು ಶಿವ ಭಕ್ತನಾಗಿ ಶಿವನನ್ನು ಪ್ರಸನ್ನ ಮಾಡಿಕೊಂಡು ಶಿವನೇ
ದರ್ಶನ ಕೊಟ್ಟು ಚಿಂತಾಮಣಿ ಎಂಬ ರತ್ನವನ್ನು ಕೊಟ್ಟನು. ಕೋಟಿ ಸೂರ್ಯ ಪ್ರಭೆಯುಳ್ಳ ಆ ರತ್ನವನ್ನು ಮಣಿಭದ್ರನು ಸದಾ ಕಾಲ ಧರಿಸಿ ಕೊಂಡಿರುತ್ತಿದ್ದನು.
ಆ ಮಣಿ ಯಾವುದೆ ಲೋಹಕ್ಕೆ ತಗುಲಿದರೂ ಅದು ಚಿನ್ನವಾಗುತ್ತಿತ್ತು. ಮಣಿಯನ್ನು ಹಿಡಿದು ಪ್ರಾರ್ಥಿಸಿದವರಿಗೆ, ಅವರು ಅಪೇಕ್ಷಿಸಿದ ವಸ್ತು ದೊರೆಯುತ್ತಿತ್ತು. ಮಣಿಯ ಖ್ಯಾತಿಯನ್ನು ಕೇಳಿದ ಅನೇಕ ರಾಜ – ಮಹಾರಾಜರು ಅದನ್ನು ಪಡೆಯಬೇಕೆಂದು ಉಜ್ಜಯಿನಿಗೆ ಬಲವಂತವಾಗಿ ಸುತ್ತುಗಟ್ಟಿದರು.
ಅಂದು ಶನಿವಾರವಾಗಿದ್ದು, ರಾಜನು ಶಾಸ್ತ್ರೋಕ್ತವಾಗಿ ಶಿವ ಪೂಜೆ ಮಾಡಲು ಕುಳಿತಿದ್ದನು. ಅಲ್ಲಿಗೆ ಬಂದ ಗೋಪ ಬಾಲಕರು ಪೂಜೆಯ ವಿಧಾನವನ್ನು ನೋಡಿಕೊಂಡರು. ಆ ಗೋಪ ಬಾಲಕರು ತಮ್ಮ ಮನೆಗಳಿಗೆ ಹೋಗಿ, ಶಿವ ಲಿಂಗವನ್ನು ಮಾಡಿ ಪತ್ರ -ಪುಷ್ಪಗಳಿಂದ, ಕಲ್ಪಿತೋಪಚಾರಗಳಿಂದ ಭಕ್ತಿಯಿಂದ ಪೂಜೆ ಮಾಡಿದರು. ಅದೇ ಹೊತ್ತಿಗೆ ಅಲ್ಲಿಗೆ ಬಂದ ಗೋಪ ಸ್ತ್ರೀಯರು ತಮ್ಮ ಮಕ್ಕಳನ್ನು ಊಟಕ್ಕೆ ಕರೆದುಕೊಂಡು ಹೋಗಲು ಬಂದರು. ಆದರೆ ಅದರಲ್ಲಿ ಒಬ್ಬ ಬಾಲಕ ಊಟಕ್ಕೆ ಹೋಗದೆ ಶಿವ ಪೂಜೆಯಲ್ಲೇ ತಲ್ಲೀನನಾಗಿದ್ದನು. ಅವನ ತಾಯಿ ಸಿಟ್ಟಿನಿಂದ ನೋಡು ಈಗ ಊಟದ ಸಮಯ, ಅಲ್ಲದೆ ಕತ್ತಲೆ ಆಗುತ್ತಿದೆ ಸಾಕು ನಿನ್ನ ಪೂಜೆ ಎದ್ದು ಬಾ ಎಂದಳು. ಆದರೂ ಹುಡುಗ ಉತ್ತರ ಕೊಡಲಿಲ್ಲ.
ಇದರಿಂದ ಸಿಟ್ಟು ಗೊಂಡ ಆಕೆ, ಆ ಬಾಲಕ ಮಾಡುತ್ತಿದ್ದ ಶಿವ ಪೂಜೆಯನ್ನು ಹಾಳು ಮಾಡಿ, ಪೂಜೆ ಮಾಡುತ್ತಿದ್ದ ಲಿಂಗವನ್ನು ಎತ್ತಿ ಬಿಸಾಡಿ ಹೋದಳು.
ಇದರಿಂದ ಹುಡುಗನಿಗೆ ಬಹಳ ದುಃಖವಾಗಿ ಶಿವನ ದ್ಯಾನವನ್ನೇ ಮಾಡುತ್ತಾ ಅಲ್ಲೇ ಪ್ರಾಣ ಬಿಡಲು ತಯಾರಾದನು. ಆ ಕ್ಷಣವೇ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷನಾದನು. ಶಿವ ಪ್ರಕಟಗೊಂಡ ಆ ಪೂಜಾ ಸ್ಥಳವೇ ಶಿವಾಲಯವಾಯಿತು. ಆ ಲಿಂಗ ರತ್ನಮಯವಾಗಿ ಸೂರ್ಯ ತೇಜಸ್ಸನ್ನು ಪಡೆದು ಪ್ರಕಾಶಿತು. ಶಿವನೇ ಕೈ ಹಿಡಿದು ಮೇಲೆತ್ತಿ ನಿನ್ನ ಇಷ್ಟವೇನು ಕೇಳು ಎಂದನು.
ಆ ಹುಡುಗನು ಪರಮೇಶ್ವರ ನನ್ನ ತಾಯಿ ಪೂಜೆಯನ್ನು ಹಾಳು ಮಾಡಿದಳು. ಅವಳನ್ನು ಕ್ಷಮಿಸಿ ದಯೆ ತೋರು ಎಂದು ಕೇಳಲು, ಕರುಣಾಮಯನಾದ ಶಿವನು ಪ್ರೀತಿಯಿಂದ ಬಾಲಕನಿಗೆ ಹೇಳಿದನು.
ಪ್ರದೋಷಕಾಲದಲ್ಲಿ ಅವಳು ನನ್ನ ಪೂಜೆಯನ್ನು ನೋಡಿದ್ದಾಳೆ. ಆದ್ದರಿಂದ ಅವಳು ದೇವಮಾತೆಯಾಗುತ್ತಾಳೆ. ಜನ್ಮಾಂತರದಲ್ಲಿ ಆಕೆಗೆ ವಿಷ್ಣು ಮಗನಾಗಿ ‘ಕೃಷ್ಣ’ ನಾಗಿ ಬರುತ್ತಾನೆ ಎಂದು ಹೇಳಿ, ಬಾಲಕ ನಿನ್ನ ಅಪೇಕ್ಷೆಗಳೆಲ್ಲ ನೆರವೇರುತ್ತದೆ ಎಂದು ಹಲವು ವರಗಳನ್ನು ಅನುಗ್ರಹಿಸಿದನು ಆ ಹುಡುಗ ಕಣ್ಣು ಮುಚ್ಚಿ ಭಕ್ತಿಯಿಂದ ನಮಸ್ಕರಿಸುತ್ತಿರುವಾಗಲೇ ಶಿವನು ಮಾಯವಾದನು.
ಆ ಬಾಲಕ ಸ್ಥಾಪಿಸಿದ ರತ್ನಲಿಂಗವು ಅಲ್ಲಿ ಸೂರ್ಯನೆ ಇದ್ದಾನೆ ಎಂಬಂತೆ ಕೋಟಿ ಸೂರ್ಯ ಪ್ರಭೆಯಿಂದ ಬೆಳಗುತ್ತಿತ್ತು. ಯುದ್ಧಕ್ಕಾಗಿ ಬಂದ ರಾಜರೆಲ್ಲರೂ, ಇದನ್ನು ಕಂಡು ಅನುಮಾನದಿಂದ, ಇಲ್ಲಿನ ರಾಜ ದಯಾವಂತನು ಪುಣ್ಯಾತ್ಮನಾಗಿರಬೇಕು ಅದ್ದರಿಂದಲೇ ಈ ನಗರದಲ್ಲಿ ರಾತ್ರಿ ವೇಳೆ ಸೂರ್ಯ ಉದಯಿಸುತ್ತಾನೆ.
ಇಂತಹ ರಾಜನ ಮೇಲೆ ಯುದ್ಧ ಮಾಡುವುದು ತರವಲ್ಲ ಅವನ ಸ್ನೇಹ ಮಾಡಬೇಕು ಎಂದು ಯೋಚಿಸಿ, ರಾಜನ ದರ್ಶನ ಮಾಡಲು ಹೇಳಿ ಕಳಿಸಿದರು.
ರಾಜನು ಸಂತೋಷದಿಂದ ತಾನೇ ಸ್ವತ: ಬಂದು ಅವರೆಲ್ಲರನ್ನು ಕರೆದೊಯ್ದನು. ಎಲ್ಲಾ ರಾಜರು, ರಾಜನಿಗೆ ವಂದಿಸಿ, ನಿಮ್ಮ ರಾಜ್ಯದಲ್ಲಿ ರಾತ್ರಿಯ ವೇಳೆ ಸೂರ್ಯ ಉದಯಿಸುತ್ತಾನೆಯೇ? ಕೇಳಿದಾಗ ಹೊಸ ವಿಷಯ ಕೇಳುವಂತೆ, ಆಶ್ಚರ್ಯದಿಂದ ರಾಜನು ರತ್ನಮಯ ಶಿವಲಿಂಗವಿದ್ದ ದೇವಸ್ಥಾನಕ್ಕೆಹೋದನು.
ಅಲ್ಲಿದ್ದ ಆ ಹುಡುಗನಿಂದ ನಡೆದ ಕಥೆಯನ್ನೆಲ್ಲ ಕೇಳಿ ಸಂತೋಷಪಟ್ಟು, ಆ ಹುಡುಗನಿಗೆ ಗೋಪಾಲಕ ಆಧಿಪತ್ಯವನ್ನೂ, ಸಂಪತ್ತನ್ನೂ ಕೊಟ್ಟನು. ಯುದ್ಧಕ್ಕಾಗಿ ಬಂದ ರಾಜರೆಲ್ಲರೂ ಸಂತೋಷದಿಂದ ತಮ್ಮ ದೇಶಗಳಿಗೆ ಹಿಂತಿರುಗಿದರು. ಈ ರೀತಿ ರಾಜ ಚಿತ್ರಸೇನಗೆ ಬಂದಿದ್ದ ಯುದ್ಧದ ಭಯ ನಿವಾರಣೆಯಾಯಿತು.
ಬಾಲಕನು ಮನೆಗೆ ಬಂದು, ನಡೆದ ವಿಚಾರವನ್ನೆಲ್ಲ ತಾಯಿಗೆ ಹೇಳಿದನು. ಅಮ್ಮಾ, ಪರಮೇಶ್ವರನು ನಿನ್ನನ್ನು ಕ್ಷಮಿಸಿದ್ದಾನೆ. ನನಗೂ ಸಾಕಷ್ಟು ವರಗಳನ್ನು ಕೊಟ್ಟಿದ್ದಾನೆ ಎಂದು ಹೇಳಲು, ಆ ತಾಯಿ ಭಗವಂತನಲ್ಲಿ ಕ್ಷಮೆ ಬೇಡಿ, ಪ್ರದೋಶ ಕಾಲದ ವ್ರತ ಸಂಕಲ್ಪ ಮಾಡಿಕೊಂಡಳು. ಈಶ್ವರನು ಪ್ರಸನ್ನನಾದರೆ ಯಾರಿಗೆ ಯಾವುದು ದುರ್ಲಭ ವಾಗುವುದಿಲ್ಲ ಎಂದು ಮಗನು ತಾಯಿಗೆ ಹೇಳಿದನು.
ಈ ಕಥೆಯನ್ನು ಹೇಳಿದ ಗುರುಗಳು ಅಂಬಿಕೆಗೆ “ನಿನ್ನ ಮನಸ್ಸಿನಲ್ಲಿ ಸತ್ ಪುತ್ರನಾಗಬೇಕೆಂಬ ಆಸೆ ಇದೆ. ಆದ್ದರಿಂದ ನೀನು ಪ್ರದೋಶ ಸಮಯದಲ್ಲಿ ಶಿವನ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡು. ನಿಶ್ಚಯವಾಗಿ ನಿನಗೆ ಜನ್ಮಾಂತರದಲ್ಲಿ ನನ್ನಂತಹ ಪುತ್ರನೇ ಜನಿಸುತ್ತಾನೆ” ಎಂದು ಶ್ರೀಪಾದರು ಅಂಬಿಕೆಗೆ ಅಭಯ ಕೊಟ್ಟರು.
ದುಃಖದಲ್ಲಿದ್ದ ಅವಳಿಗೆ ಸಮಾಧಾನ ಪಡಿಸಲು ಗುರುಗಳು ಅವಳ ಮಗನನ್ನು ಕರೆದು ಅವನ ತಲೆಯ ಮೇಲೆ ಕೈಯಿಟ್ಟರು ಕೂಡಲೇ ಆ ದಡ್ಡ ಹುಡುಗನು ಮಹಾ ಜ್ಞಾನಿಯಾಗಿ, ಮೂರು ವೇದಗಳನ್ನು ಬಲ್ಲವನಾದನು.
ಅಲ್ಲಿಯವರೆಗೂ ಮಂದಮತಿಯಾಗಿದ್ದ ಅವನು ಆ ಕ್ಷಣದಲ್ಲಿ ವೇದಪಾರಂಗತನಾಗಿ ವೇದ ಪಠನ ಮಾಡುವುದನ್ನು ಕಂಡ ಆ ತಾಯಿ ಆಶ್ಚರ್ಯ ಚಿಕಿತಳಾದಳು. ಆದ್ದರಿಂದಲೆ ಸಾಕ್ಷಾತ್ ಪರಮೇಶ್ವರನೇ, ಲೋಕ ಕಾರ್ಯಾರ್ಥವಾಗಿ ಮಾನವ ರೂಪದಲ್ಲಿ ಶ್ರೀಪಾದರಾಗಿ ಅವತರಿಸಿದ್ದಾನೆ. ಅಂಬಿಕೆಯು ತನ್ನ ಪೂರ್ವ ಜನ್ಮದ ಸುಕೃತ ಫಲದಿಂದಲೇ ಗುರುಗಳ ದರ್ಶನವಾಯಿತು ಎಂದು ಸಂತೋಷಪಟ್ಟು ಮತ್ತೆ ಗುರುವಿಗೆ ನಮಸ್ಕರಿಸಿ, ಸ್ವಾಮಿ ನೀನೇ ಶಿವನು.ಪ್ರದೋಷದಲ್ಲಿ ನಿಮ್ಮನ್ನೇ ಅರ್ಚಿಸುತ್ತೇನೆ. ನಿಮ್ಮ ಮಾತು ಎಂದಿಗೂ ಸುಳ್ಳಾಗುವುದಿಲ್ಲ ನನಗೆ ನಿಮ್ಮಂತಹ ಮಗನೆ ಹುಟ್ಟುತ್ತಾನೆ ಎಂದು ಅವರನ್ನು ಪೂಜಿಸಿ ತನ್ನ ಊರಿಗೆ ಹಿಂತಿರುಗಿದಳು.
ಅಂದಿನಿಂದ ಅವಳು ತಪ್ಪದೇ ಶಿವ ಪ್ರದೋಷ ಪೂಜೆ ಮಾಡಲಾರಂಭಿಸಿದಳು.
ಶ್ರೀ ಗುರು ದಯದಿಂದ ಅವಳ ಮಗ ವೇದಶಾಸ್ತ್ರ ಪುರಾಣ ಪಾರಂಗತನಾಗಿ ವಿನಯ ವಂತನಾಗಿ ಎಲ್ಲರಿಂದಲೂ ಎಲ್ಲೆಡೆಯಲ್ಲಿಯೂ ಪೂಜೆಗೊಳ್ಳವನಾದನು.
ಸ್ವಾಮಿಯ ಅನುಗ್ರಹದಿಂದ ವಿವಾಹಿತನಾಗಿ ಪುತ್ರ ಪೌತ್ರಾದಿಗಳಿಂದ ಕೂಡಿ ಸ್ವಗ್ರಾಮದಲ್ಲಿ ಸಂತೋಷದಿಂದ ಬಾಳಿದನು. ಗುರು ಕೃಪೆ ಭಕ್ತ ಜನರಿಗೆ ಸರ್ವಾರ್ಥಗಳನ್ನು ತಂದುಕೊಡಬಲ್ಲದು ಎಂದು ಸಿದ್ದಮುನಿಗಳು ನಾಮಧಾರ ಕನಿಗೆ ಹೇಳಿದರು ಎಂಬಲ್ಲಿಗೆ ಶ್ರೀ ಗುರು ಚರಿತ್ರೆ ಸಂಪನ್ನವಾಯಿತು.
ಬರಹ: ಆಶಾ ನಾಗಭೂಷಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

