ದೊಡ್ಡಬಳ್ಳಾಪುರ: (ನ.05): ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೂಲಸೌಕರ್ಯಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ಕಾಪಾಡಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ಆರೋಗ, ಕುಟುಂಬ ಕಲ್ಯಾಣ,ವೈದ್ಯಕೀಯ ಶಿಕ್ಷಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಪ್ರೌಢಶಾಲೆ ಆವರಣದಲ್ಲಿ ಮಧುರೆ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ವಿವಿಧ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿ ಈ ನಿರ್ದೇಶನಗಳನ್ನು ನೀಡಿದರು.
ಅಂಗನವಾಡಿಗಳ ಕಾರ್ಯರ್ತೆಯರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಅಂಗನವಾಡಿಗಳಿಗೆ ದಾಖಲಾಗುವ ಹಾಗೂ ಹಾಜರಾಗುವ ಮಕ್ಕಳ ಮಾಹಿತಿ, ಕಟ್ಟಡಗಳ ಸೌಕರ್ಯಗಳ ವಿವರ ಪಡೆದರು.
ಹೆಚ್ಚು ಮಕ್ಕಳು ಇರುವ ಅಂಗನವಾಡಿಗಳಿಗೆ ತುರ್ತಾಗಿ ಸೂಕ್ತ ಸ್ಥಳಾವಕಾಶ, ಕೊಠಡಿಗಳನ್ನು ಒದಗಿಸಿ, ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸೂಚಿಸಿದರು.
ಕನಸವಾಡಿಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ, ಪೀಠೋಪಕರಣಗಳು, ಸೌಕರ್ಯಗಳ ಸುಧಾರಣೆಗೆ ಸೂಚಿಸಿದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ, ಕಂಟನಕುಂಟೆ ಗ್ರಾಮದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ನೂತನ ಕಟ್ಟಡ ಉದ್ಘಾಟನೆ,
ಹುಲಿಕುಂಟೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಪಶು ಚಿಕಿತ್ಸಾಲಯ ಕಟ್ಟಡದ ಉದ್ಘಾಟನೆ, ಸಾಸಲು ಹೋಬಳಿಯಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಕಟ್ಟಡಗಳ ಉದ್ಘಾಟನೆ ಸೇರಿ ಒಟ್ಟು 19.81 ಕೋಟಿ ರೂ.ಗಳ ವೆಚ್ಚದ 23 ಕಾಮಗಾರಿಗಳ ಉದ್ಘಾಟನೆ ಹಾಗೂ 42 ಕಾಮಗಾರಿಗಳ ಶಂಕುಸ್ಥಾಪನೆಯನ್ನು ಸಚಿವ ಡಾ.ಸುಧಾಕರ್ ಅವರು ನೆರವೇರಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ, ತಹಶೀಲ್ದಾರ್ ಮೋಹನಕುಮಾರಿ, ತಾಪಂ ಇಒ ಶ್ರೀನಾಥ್ ಗೌಡ, ಬಿಇಒ ಆರ್.ರಂಗಪ್ಪ, ಸಿಡಿಪಿಒ ಅನಿತಾಲಕ್ಷ್ಮೀ ಮತ್ತಿತರರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

