ದೊಡ್ಡಬಳ್ಳಾಪುರ, (ನ.07): ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿ ಸರ್ಕಾರಿ ನೌಕರರು ರಾಜ್ಯದಾದ್ಯಂತ ನಡೆಸುತ್ತಿರುವ ‘ಒಪಿಎಸ್ ಸಂಕಲ್ಪ ಯಾತ್ರೆ’ ಮಂಗಳವಾರ ದೊಡ್ಡಬಳ್ಳಾಪುರಕ್ಕೆ ಆಗಮಿಸಲಿದ್ದು, ಯಾತ್ರೆಯಲ್ಲಿ ಭಾಗವಹಿಸುವಂತೆ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಭೇಟಿ ಮಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು, ರಾಜ್ಯದಲ್ಲಿ 2006ರ ಏ.1ರ ನಂತರ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ಎನ್‌ಪಿಎಸ್ ಜಾರಿಗೊಳಿಸಲಾಗಿದೆ. ಇದರ ಅನ್ವಯ, ಸೇವಾನಿವೃತ್ತಿ ಹೊಂದಿದವರಿಗೆ ಅಲ್ಪಪ್ರಮಾಣದ ಪಿಂಚಣಿ ಸಿಗಲಿದೆ. ಪಿಂಚಣಿ ವಿಚಾರವಾಗಿ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದನ್ನು ವಿರೋಧಿಸಿ ಯಾತ್ರೆ ನಡೆಸುತ್ತಿದ್ದೇವೆ.

ನವೆಂಬರ್ 08ರಂದು ಯಾತ್ರೆ ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದು ಬೆಳಗ್ಗೆ 11 ಗಂಟೆಗೆ ಬಯಲು ಬಸವಣ್ಣ ದೇವಾಲಯ, ಇಸ್ಲಾಂಪುರ ರಸ್ತೆಯ ಮೂಲಕ ತಾಲೂಕು ಕಚೇರಿ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಮನವಿ ಸ್ವೀಕರಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸದನದಲ್ಲಿ ನೌಕರರಿಗಾಗುತ್ತಿರುವ ಅನ್ಯಾಯದ ಕುರಿತಂತೆ ಸದನದಲ್ಲಿ ಪ್ರಶ್ನಿಸಲಾಗುವುದೆಂದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
