ದೊಡ್ಡಬಳ್ಳಾಪುರ, (ನ.03): ನಿರ್ಮಾಣಗೊಂಡು ವರ್ಷ ತುಂಬುವ ಮುನ್ನವೇ ಕುಸಿತ ಕಂಡಿದ್ದ, ತಾಲೂಕಿನ ಹೊಸಹಳ್ಳಿ – ಕಲ್ಲುಕುಂಟೆ ನಡುವಿನ ಮುಖ್ಯ ರಸ್ತೆಗೆ ಅಧಿಕಾರಿಗಳು ಗುತ್ತಿಗೆದಾರನ ಮೂಲಕ ತೇಪೆ ಹಚ್ಚಿಸುವಲ್ಲಿ ಯಶಸ್ವಿಯಾಗಿದ್ದು, ಉಂಟಾಗಬಹುದಾಗಿದ್ದ ಅನಾಹುತವನ್ನು ತಾತ್ಕಾಲಿಕವಾಗಿ ತಪ್ಪಿಸಿದ್ದಾರೆ.

ತಾಲೂಕಿನ ಜಕ್ಕೇನಹಳ್ಳಿ ಬಳಿ ಕುಸಿತವಾಗಿದ್ದ ರಸ್ತೆಗೆ ಮಣ್ಣು ಸುರಿದು ಹೆಚ್ಚಿನ ಹಾನಿಯಾಗದಂತೆ ಕಾಮಗಾರಿ ನಡೆಸಲಾಗಿದ್ದು, ಅಲ್ಲದೆ ಸಮೀಪದಲ್ಲಿನ ಗುಂಡಿಗೆ ಜಲ್ಲಿ – ಮಣ್ಣು ಹಾಕಲಾಗಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ತಾಲೂಕಿನ ಹೊಸಹಳ್ಳಿ ಗ್ರಾಮದಿಂದ ಕಲ್ಲುಕುಂಟೆ ಗ್ರಾಮದವರೆವಿಗೂ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಜಕ್ಕೇನಹಳ್ಳಿ ಬಳಿಯ ಸೇತುವೆ ಸಮೀಪ ಕುಸಿದಿತ್ತು.
ಈಗಾಗಲೇ ಈ ವ್ಯಾಪ್ತಿಯಲ್ಲಿ ಎರಡು ಸೇತುವೆ ಕುಸಿದು, ಮೂರನೇ ಸೇತುವೆ ಕುಸಿಯುವ ಆತಂಕ ಎದುರಾಗಿದ್ದರು… ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ, ರಸ್ತೆ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರನಾಗಲಿ ಗಮನಹರಿಸುತ್ತಿಲ್ಲ ಎಂಬ ಆಕ್ರೋಶ ಈ ವ್ಯಾಪ್ತಿಯ ಜನರದ್ದಾಗಿತ್ತು.
ಕಾಮಗಾರಿ: ಸಂಪೂರ್ಣ ಪಾಳು ಬಿದ್ದಿದ್ದ ಹೊಸಹಳ್ಳಿ- ಕಲ್ಲುಕುಂಟೆ ಸಂಪರ್ಕ ರಸ್ತೆಗೆ ಶಾಸಕ ಟಿ.ವೆಂಕಟರಮಣಯ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಎರಡು ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಕಳೆದ 2021ರ ಜ.12 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಗುತ್ತಿಗೆದಾರನ ವಿಳಂಬ, ಅಧಿಕಾರಿಗಳ ಕರ್ತವ್ಯ ಲೋಪದಿಂದ ಶಂಕುಸ್ಥಾಪನೆ ನಡೆದು ಎಂಟು ತಿಂಗಳು ಕಳೆದರು. ರಸ್ತೆ ಕಾಮಗಾರಿ ಆರಂಭವಾಗಿರಲಿಲ್ಲ.
ರಸ್ತೆ ಕಾಮಗಾರಿ ವಿಳಂಬದ ಕುರಿತು ಆಕ್ಷೇಪಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ, ತ್ವರಿತವಾಗಿ ರಸ್ತೆ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನಂತರ ಎಚ್ಚೆತ್ತ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸಿದ್ದ. ಆದರೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುವ ಮುನ್ನವೇ ಜಕ್ಕೇನಹಳ್ಳಿ ಬಳಿಯ ಸೇತುವೆ ರಸ್ತೆ ಗುಂಡಿ ಬಿದ್ದಿದ್ದಲ್ಲದೆ, ಸಮೀಪದಲ್ಲಿಯೇ ಭೂಮಿ ಕುಸಿದಿದ್ದಲ್ಲದೆ, ಸೇತುವೆಯ ಇಕ್ಕೆಲ ಸೇರಿದಂತೆ ರಸ್ತೆ ತೀವ್ರವಾಗಿ ಕುಸಿದು ವಾಹನ ಸವಾರರು ಅಪಘಾತ ಒಳಗಾಗುವ ಆತಂಕ ಎದುರಾಗಿತ್ತು.
ಇದರಿಂದಾಗಿ ಹೊಸಹಳ್ಳಿ – ಆರೂಢಿ – ಗೊರವನಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆ ಗುಣಮಟ್ಟದ ಕಾಮಗಾರಿ ನಡೆಸದ ಕಾರಣ ಸರ್ಕಾರದ ಎರಡು ಕೋಟಿ ಅನುದಾನ ವ್ಯರ್ಥವಾಗಿದೆ ಅಲ್ಲದೆ 40%ಗೂ ಹೆಚ್ಚಿನ ಕಮಿಷನ್ ಆರೋಪ ಸ್ಥಳೀಯರದ್ದಾಗಿತ್ತು.
ಈ ಕುರಿತಂತೆ ಹರಿತಲೇಖನಿ ಹಾಗೂ ಇತರೆ ಮಾಧ್ಯಮಗಳು ಸುದ್ದಿ ಪ್ರಕಟಿಸಿ, ಉಂಟಾಗಬಹುದಾಗಿದ್ದ ತೊಂದರೆಯನ್ನು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕುಸಿಯುತ್ತಿದ್ದ ರಸ್ತೆಗೆ ಪ್ರಸ್ತುತ ಮಣ್ಣು ಸುರಿದು ತೇಪೆ ಹಚ್ಚಲಾಗಿದೆ.
ಆದರೆ, ಇದೇ ರಸ್ತೆಯಲ್ಲಿನ ಉಜ್ಜನಿ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲಿಯೇ ಉಂಟಾಗಿರುವ ದೊಡ್ಡ ಪ್ರಮಾಣದ ಗುಂಡಿ ಅಧಿಕಾರಿಗಳ ಕಣ್ಣಿಗೆ ಕಾಣದೇ ಹೋಗಿದ್ದು ಮಾತ್ರ ವಿಪರ್ಯಾಸ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
