ಬಹಳ ಹಿಂದೆ ಸಹ್ಯಾದ್ರಿ ಪರ್ವತದಲ್ಲಿ ಕರವೀರ ಎಂಬ ನಗರವಿತ್ತು. ಅಲ್ಲಿ ಧರ್ಮದತ್ತನೆಂಬ ಆಸ್ತಿಕನಾಗಿ, ಶ್ರೀಹರಿಯ ಪರಮ ಭಕ್ತನಾದ ಬ್ರಾಹ್ಮಣನಿದ್ದನು. ಆತನು ನಿತ್ಯವೂ ತಪ್ಪದೇ ಅತಿಥಿ ಸೇವೆಯನ್ನು ಮಾಡುತ್ತಿದ್ದನು.
ಒಮ್ಮೆ ಕಾರ್ತಿಕ ಮಾಸವು ಬಂದಾಗ ಆ ಬ್ರಾಹ್ಮಣನು ಏಕಾದಶಿಯ ರಾತ್ರಿ ಜಾಗರಣೆ ಮಾಡಿ ಮರುದಿನ ಸೂರ್ಯೋದಯಕ್ಕೂ ಮುನ್ನ ಒಂದು ವಿಷ್ಣು ದೇವಾಲಯಕ್ಕೆ ಹೊರಟನು.
ಆಗ ಆತನಿಗೆ ಎದುರಾಗಿ ಭೀಕರ ರೂಪದ ರಾಕ್ಷಸಿ ಒಬ್ಬಳು ಕೆಂಡದಂತೆ ಪ್ರಜ್ವಲಿಸುವ ಕಣ್ಣುಗಳು ಬೀಕರವಾದ ಕೋರೆ ದಾಡೆ, ನಾಲಿಗೆ, ಮಾಂಸರಹಿತವಾದ ಶರೀರ ಇವುಗಳಿಂದ ಬೀಕರವಾಗಿ ಕಾಣಿಸುತ್ತಿದ್ದ ರಾಕ್ಷಸಿಯು ಘರ್ಜಿಸಿದಳು.
ರಾಕ್ಷಸಿಯನ್ನು ನೋಡಿದ ಬ್ರಾಹ್ಮಣನು ಹೆದರಿದನು. ಧೈರ್ಯ ತಂದುಕೊಂಡು ತನ್ನೊಡನೆ ತುಳಸಿ ಮಿಶ್ರಿತವಾದ ನೀರನ್ನು ಹರಿಸ್ಮರಣೆ ಮಾಡುತ್ತಾ ಆ ರಾಕ್ಷಸಿಯ ಮೇಲೆ
ಎರಚಿದನು. ಆ ನೀರು ತಾಕಿದೊಡನೆ ರಾಕ್ಷಸಿಯ ಭಯಂಕರ ರೂಪ ನಾಶವಾಯಿತು. ಅವಳ ಪಾಪಕರ್ಮಗಳೆಲ್ಲ ನಾಶವಾಯಿತು.
‘ಕಲಹಾ’ ಎಂಬ ಹೆಸರಿನ ಆ ರಾಕ್ಷಸಿ ಬ್ರಾಹ್ಮಣನಿಗೆ ಸಾಷ್ಟಾಂಗ ಪ್ರಣಾಮ ಮಾಡಿದಳು. ತನ್ನ ಪೂರ್ವ ಜನ್ಮದ ಪಾಪ ವೃತ್ತಾಂತವನ್ನು ಆತನಲ್ಲಿ ಹೇಳಿ ಕೊಂಡಳು.
ಹೇ, ಬ್ರಾಹ್ಮಣೋತ್ತಮ ಹಿಂದೆ ಸೌರಾಷ್ಟ್ರ ದೇಶದಲ್ಲಿ ಬ್ರಾಹ್ಮಣನ ಪತ್ನಿಯಾಗಿದ್ದೆ. ಕಠೋರವಾದ ನಡವಳಿಕೆ ಇದ್ದ ನನ್ನನ್ನು ಎಲ್ಲರೂ ‘ಕಲಹಾ’ ಎಂದೇ ಕರೆಯುತ್ತಿದ್ದರು. ನಾನು ಎಂದಿಗೂ ಪತಿಯ ಆಜ್ಞೆಯನ್ನು ಪಾಲಿಸುತ್ತಿರಲಿಲ್ಲ. ಯಾವಾಗಲೂ ಆತನ ಜೊತೆ ಜಗಳವಾಡುತ್ತಿದ್ದೆ. ನಾನು ನನ್ನ ಪತಿಗೆ ಸರಿಯಾಗಿ ಭೋಜನವನ್ನು ಮಾಡಿ ಬಡಿಸುತ್ತಿರಲಿಲ್ಲ.
ಕೆಲವು ಕಾಲದ ನಂತರ ಬೇಸತ್ತ ನನ್ನ ಪತಿಯು ಇನ್ನೊಂದು ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಈ ವಿಷಯ ತಿಳಿದು, ನಾನು ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡೆ. ಯಮನದೂತರು ನನ್ನನ್ನು ಯಮನ ಬಳಿಗೆ ಕರೆದೊಯ್ದರು. ಯಮಧರ್ಮ ರಾಜನು ಚಿತ್ರಗುಪ್ತನ ಕಡೆಗೆ ನೋಡಿ, ಇವಳ ಕರ್ಮದ ಲೆಕ್ಕಾಚಾರವನ್ನು ನೋಡು ಎಂದನು.
ಶುಭಾ ಶುಭ ಕರ್ಮಗಳ ಪಟ್ಟಿಯೇ ಸಿದ್ಧವಾಯಿತು.
ಚಿತ್ರಗುಪ್ತನು, ಸ್ವಾಮಿ ಇವಳು ತಾನು ಬದುಕಿದ್ದಾಗ ಒಂದೇ ಒಂದು ಸತ್ಕಾರ್ಯವನ್ನು ಮಾಡಲಿಲ್ಲ. ತಾನು ಒಳ್ಳೆಯ ಊಟ ಮಾಡಿ ಪತಿಗೆ ಹಳಸಿದ ಅನ್ನ ಕೊಡುತ್ತಿದ್ದಳು. ಇದರ ಫಲವಾಗಿ ಈಕೆಗೆ ಮೇಕೆಯ ಜನ್ಮ ಬರಬೇಕು.
ನಿತ್ಯವೂ ಗಂಡನೊಡನೆ ಜಗಳವಾಡುತ್ತಿದ್ದ ಕಾರಣ ಹಂದಿಯ ಜನ್ಮ ಬರಬೇಕು. ಮಾಡಿದ ಅಡುಗೆಯನ್ನು ತಾನು ಒಬ್ಬಳೇ ತಿನ್ನುತ್ತಿತ್ತುದರಿಂದ ಬೆಕ್ಕಿನ ಜನ್ಮ ಬರಬೇಕು. ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಪ್ರೇತ ಶರೀರ ಬರಬೇಕು. ಆ ಪ್ರೇತ ರೂಪದಲ್ಲಿ ಕೆಲವು ಕಾಲ ನೀರಿಲ್ಲದೆ ಕಳೆದು, ನಂತರ ಮೂರು ಜನ್ಮ ತಾಳಬೇಕು ಎಂದು ಹೇಳಿದನು.
ಹೀಗೆ ಕಲಹಾ ರಾಕ್ಷಸಿಯು ಧರ್ಮದತ್ತನಿಗೆ ತನ್ನ ವೃತ್ತಾಂತವನ್ನು ವಿವರವಾಗಿ ತಿಳಿಸಿದಳು. ನಾನು ಹಲವು ವರ್ಷಗಳಿಂದ ಅನ್ನ ನೀರಿಲ್ಲದೆ ಬಳಲುತ್ತಿದೆ.
ಒಮ್ಮೆ ಕೃಷ್ಣ ಸಂಗಮ ಸ್ನಾನಕ್ಕೆ ಹೋದಾಗ ಅಲ್ಲಿ ಶಿವಗಣಗಳು ನನ್ನನ್ನು ಹೊಡೆದು ಅಟ್ಟಿದವು ಅಲ್ಲಿಂದ ಇಲ್ಲಿಗೆ ಬಂದೆ. ಈ ದಿನ ಪರಮ ಪವಿತ್ರವಾದ ತುಳಸಿ ಜಲದಿಂದ ನೀನು ನನ್ನನ್ನು ತಾಕಿದೊಡನೆ ನನಗೆ ಪೂರ್ವ ಜನ್ಮದ ಸ್ಮರಣೆ ಬಂದಿತು.
ತೇಜಸ್ವಿಯಾದ ನಿನ್ನಂತಹ ಬ್ರಾಹ್ಮಣೋತ್ತಮನ ದರ್ಶನ ಭಾಗ್ಯದಿಂದ ನಾನು ಶಾಪ ಮುಕ್ತಳಾದೆ. ಹೇ ವಿಪ್ರೋತ್ತಮ, ನನ್ನನ್ನು ನೀನು ಕೃಪೆ ಮಾಡಿ ಪರಮ ಯಾತನಾಮಯವಾದ ಈ ಪ್ರೇತ ಶರೀರದಿಂದ ಬಿಡುಗಡೆಗೆ ಪರಿಹಾರ ಸೂಚಿಸು. ಮುಂದೆ ನಾನು ತಾಳಬೇಕಾದ ಮೂರು ಜನ್ಮಗಳನ್ನು ತಪ್ಪಿಸಿ ಮುಕ್ತಿಯ ದಾರಿಯನ್ನು ತೋರಿಸು ಎಂದು ಪ್ರೇತರೂಪಿಯಾದ ಕಲಹೆಯು ಧರ್ಮದತ್ತನನ್ನು ಅಂಗಲಾಚಿ ಬೇಡಿದಳು.
ರಾಕ್ಷತಸಿಯ ವೃತ್ತಾಂತವನ್ನು ಆಲಿಸಿದ ಬ್ರಾಹ್ಮಣನು ಅವಳ ಮೇಲಿನ ಕರುಣೆಯಿಂದ, ದೀರ್ಘವಾಗಿ ಯೋಚನೆ ಮಾಡಿ, ಧರ್ಮಾ ಧರ್ಮಗಳ ಸೂಕ್ಷ್ಮವನ್ನುರಿತು, ದುಃಖದಿಂದ ದಯಾರ್ದ ಹೃದಯದವನಾದನು ಮತ್ತು ಕಲಹಾಗೆ ಹೀಗೆ ಹೇಳಿದನು.
ಹೇ ಸ್ತ್ರೀಯೇ, ತೀರ್ಥ ಸ್ನಾನ, ದಾನ- ವ್ರತ ಪೂಜಾದಿಗಳಿಂದ ಪಾಪಗಳು ನಾಶವಾಗುತ್ತವೆ. ಆದರೆ ಈ ಪ್ರೇತ ಶರೀರದಿಂದ ನೀನು ಅವುಗಳನ್ನು ಮಾಡಲು ಸಾಧ್ಯವಿಲ್ಲ. ಅಲ್ಲದೆ ಮುಂಬರುವ ಮೂರು ಜನ್ಮಗಳ ಕರ್ಮ ಪರಿಹಾರ ಅಷ್ಟು ಸುಲಭವೂ ಅಲ್ಲ. ಆದ್ದರಿಂದ ನಾನು ಆಜನುಮ ಕಾರ್ತಿಕ ವ್ರಥ ಮಾಡಿದ್ದರ ಫಲದ ಅರ್ಧ ಭಾಗವನ್ನು ನಿನಗೆ ಧಾರೆ ಎರೆದು ಕೊಡುವೆ. ಇದರಿಂದ ನಿನಗೆ ಮೋಕ್ಷ ದೊರಕುವಂತಾಗಲಿ ಎಂದ ಬ್ರಾಹ್ಮಣನು.
ನಾರಾಯಣ ಮಂತ್ರದ ಜಪ ಸಹಿತವಾಗಿ ತುಳಸಿ ಜಲದಿಂದ ಆ ಪ್ರೇತಕ್ಕೆ ಪ್ರೋಕ್ಷಿಸಿ ಕಾರ್ತಿಕ ವ್ರತದ ಪುಣ್ಯವನ್ನು ಧಾರೆ ಎರೆದು ಅವನು ಪುಣ್ಯವಂತನಾಗಲು, ಇದರಿಂದ ಆಕೆಯ ಪ್ರೇತ ಜನ್ಮ ನಾಶವಾಗಿ ತೇಜೋ ಮಯವಾದ ದಿವ್ಯ ಶರೀರವು ಬಂದಿತು. ಪ್ರೇತ ಶರೀರ ನಿವೃತ್ತಿಯಾದ ಬಳಿಕ ಆ ಕಲಹೆಯು ಕೃತಜ್ಞತಾ ಭಾವದಿಂದ ಬ್ರಾಹ್ಮಣನಿಗೆ ಅನೇಕ ಬಾರಿ ನಮಸ್ಕಾರ ಮಾಡಿದಳು.
ಆಗ ವಿಷ್ಣುಸೂತರು ಆಕಾಶ ಮಾರ್ಗದಲ್ಲಿ ವಿಮಾನ ಸಹಿತರಾಗಿ ಅಲ್ಲಿಗೆ ಬಂದರು. ಅವರಲ್ಲಿ ಪುಣ್ಯಶೀಲ, ಸುಶೀಲರೆಂಬ ದ್ವಾರಪಾಲಕರು ಆಕೆಯನ್ನು ವಿಮಾನದಲ್ಲಿ ಕೂರಿಸಿದರು. ಅಪ್ಸರೆಯರು ಹಾಗೂ ಇತರ ದೇವತಮಾ ಸ್ತ್ರೀಯರು ಆಕೆಯನ್ನು ಆದರೊಪಚಾರಗಳಿಂದ ಬರಮಾಡಿಕೊಂಡರು.
ವಿಷ್ಣು ಲೋಕದಿಂದ ಬಂದ ವಿಮಾನವನ್ನು ನೋಡಿ, ಧರ್ಮದತ್ತನು ವಿಷ್ಣು ದೂತರಿಗೆ ವಂದಿಸಿದನು. ವಿಷ್ಣು ದೂತರಾದ ಸುಶೀಲಾ ಪುಣ್ಯಶೀಲರು ಧರ್ಮದತ್ತ ನನ್ನು ಕುರಿತು ಹೀಗೆ ಹೇಳಿದರು.
ಹೇ ವಿಪ್ರೋತಮನಾದ ವಿಷ್ಣು ಭಕ್ತನೇ, ದೀನರಲ್ಲಿ ದಯೆ ತೋರಿಸುವಾತನು, ದೈವಭಕ್ತನೂ, ಆದ ನೀನು ಧನ್ಯನೇ ಸರಿ. ಒಬ್ಬ ದೀನಳಿಗಾಗಿ ಲೋಕೋತ್ತರವಾದ ಕಾರ್ತಿಕ ಮಾಸದ ಮಹಿಮಾ ವ್ರತದ ಪುಣ್ಯವನ್ನು ಧಾರೆ ಎರೆದಿರುವೆ. ಇದರಿಂದ ನಿನ್ನ ಸಕಲ ಪಾಪಗಳು ನಾಶವಾಯಿತು.
ಇವಳು ಮಾಡಿದ ಪಾಪಗಳು ಭಸ್ಮವಾಯಿತು. ನೀನು ಮಾಡಿದ ದೀಪದಾನದ ಫಲವಾಗಿ ಆಕೆಗೆ ದಿವ್ಯ ರೂಪವು, ತುಳಸಿ ಪೂಜೆಯಿಂದ ಆಕೆಗೆ ವಿಷ್ಣು ಲೋಕ ಪ್ರಾಪ್ತಿಯೂ, ಜಾಗರಣೆ ಫಲದಿಂದ ದಿವ್ಯ ವಿಮಾನಯಾನವು ಲಭಿಸಿತು. ಈ ಎಲ್ಲಾ ಪುಣ್ಯದಾನಗಳಿಂದ ನಿನ್ನ ಪುಣ್ಯವು ಅನಂತವಾಯಿತು. ನಿನಗೆ ವೈಕುಂಠ ಲೋಕ ಪ್ರಾಪ್ತಿಯಾಗುತ್ತದೆ.
ಹೇ ಬ್ರಾಹ್ಮಣನೆ ಇನ್ನೂ ನಿನಗೆ ಸಿಗುವ ಪುಣ್ಯಫಲವನ್ನು ಕೇಳು, ವೈಕುಂಠ ಲೋಕದಲ್ಲಿ ನಿನ್ನ ಪುಣ್ಯವು ಮುಗಿದ ಬಳಿಕ, ತ್ರೇತಾಯುಗದಲ್ಲಿ ಸೂರ್ಯ ವಂಶದಲ್ಲಿ ದಶರಥ ಚಕ್ರವರ್ತಿಯಾಗಿ ಜನಿಸಿ, ಶ್ರೀಮನ್ನಾರಾಯಣ ನನ್ನು ಮಗನನ್ನಾಗಿ ಪಡೆಯುವೆ.
ಈ ಕಲಹಾ ಆಗ ಕೈಕೆಯಿಯಾಗಿ ಜನ್ಮ ತಾಳಿ ದೇವಕಾರ್ಯಾರ್ಥವಾಗಿ ರಾವಣ ಸಂಹಾರಕ್ಕೆ ಕಾರಣವಾಗುತ್ತಾಳೆ. ನಿನ್ನ ವ್ರತದ ಅರ್ಧ ಪುಣ್ಯದಿಂದಲೇ ಇಷ್ಟು ಫಲವೆಂದ ಬಳಿಕ ಕಾರ್ತಿಕ ಮಾಸದ ಮಹಿಮೆಯ ಫಲವನ್ನು ಎಷ್ಟೆಂದು ಹೇಳಲು ಸಾಧ್ಯವಿಲ್ಲ ಅದು ಅಗಣಿತ ವಾದದ್ದು ಅನಂತವಾದದ್ದು ಎಂದು ಹೇಳಿ ವಿಷ್ಣು ದೂತರು ವಿಷ್ಣು ಲೋಕಕ್ಕೆ ಹೊರಟರು.
ಬರಹ: ಆಶಾ ನಾಗಭೂಷಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

