ದೊಡ್ಡಬಳ್ಳಾಪುರ, (ನ.17): ರಾಜಕೀಯ ಭಿನ್ನಾಭಿಪ್ರಾಯದ ಕಾರಣ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೋರ್ವ ಕೆರೆಗೆ ಹಾರಿ ಸಾವನಪ್ಪಿರುವ ಘಟನೆ ತಾಲೂಕಿನ ತಳಗವಾರ ಕೆರೆಯಲ್ಲಿ ಸಂಭವಿಸಿದೆ.

ಮೃತರನ್ನು ನಗರದ ಕಚೇರಿಪಾಳ್ಯದ ನಿವಾಸಿ ವಿನೋದ್ (30ವರ್ಷ) ಎಂದು ಗುರುತಿಸಲಾಗಿದ್ದು, ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ವಿನೋದ್, ಸ್ಥಳೀಯ ರಾಜಕೀಯ ಕಿರುಕುಳಕ್ಕೆ ನೊಂದು, ಐವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಮನೆಯಿಂದ ತೆರಳಿದ ವಿನೋದ್ ತಳಗವಾರ ಕರೆ ಬಳಿ ಮೊಬೈಲ್, ಚಪ್ಪಲಿ, ಹಾಗೂ ಒಂದು ಪತ್ರವನ್ನು ಬರೆದಿಟ್ಟು ಕಾಣೆಯಾಗಿದ್ದಾರೆ.
ಈ ವೇಳೆ ದನಗಳಿಗೆ ನೀರು ಕುಡಿಸಲು ವ್ಯಕ್ತಿಯೋರ್ವರು ಕೆರೆ ಬಳಿ ತೆರಳಿದಾಗ, ಮೋಬೈಲ್ ರಿಂಗ್ ಆಗುತ್ತಿರುವುದು ಗಮನಿಸಿ ಬಳಿಗೆ ತೆರಳಿದ್ದಾರೆ. ಸ್ಥಳದಲ್ಲಿ ಚಪ್ಪಲಿ, ಮೊಬೈಲ್ ಹಾಗು ಒಂದು ಪತ್ರ ಇರುವುದು ಕಂಡು ಬಂದಿದ್ದು, ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಇನ್ಸ್ಪೆಕ್ಟರ್ ಮುನಿಕೃಷ್ಣ ಹಾಗೂ ಸಿಬ್ಬಂದಿ ಅಕ್ಕಪಕ್ಕದಲ್ಲಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಸಿ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ವಿನೋದ್ ಶವ ಪತ್ತೆಯಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
