ಬೆಂ.ಗ್ರಾ.ಜಿಲ್ಲೆ, (ನ.20): ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯ ವಡ್ಡರಹಳ್ಳಿಯಲ್ಲಿ ಶನಿವಾರ ನ.19 ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ನಡೆಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಯೋಜನೆಗಳಡಿ ಕಂಟನಕುಂಟೆ ಗ್ರಾಪಂ ವ್ಯಾಪ್ತಿಯ 6186 ಫಲಾನುಭವಿಗಳಿಗೆ ಸುಮಾರು 1 ಕೋಟಿ 85 ಲಕ್ಷ ರೂ ಮೌಲ್ಯದ ವಿವಿಧ ಸೌಲಭ್ಯಗಳನ್ನು ಹಸ್ತಾಂತರಿಸಲಾಗಿದೆ.
ಕಂದಾಯ ಇಲಾಖೆಯು 94 ಸಿ ಹಾಗೂ 94 ಸಿಸಿ ಅಡಿ 115 ಹಕ್ಕುಪತ್ರಗಳು, 16 ಪೌತಿ ಖಾತೆ ದಾಖಲೆಗಳು, 137 ಪಹಣಿ ತಿದ್ದುಪಡಿ ದಾಖಲೆಗಳು ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ,ವಿಧವಾ ವೇತನ,ಸಂಧ್ಯಾ ಸುರಕ್ಷಾ ಯೋಜನೆ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಸುಮಾರು 250 ಕ್ಕೂ ಹೆಚ್ಚು ಮಂಜೂರಾತಿ ಆದೇಶಗಳನ್ನು ಹಸ್ತಾಂತರಿಸಲಾಯಿತು.ಸರ್ಕಾರದ ಒತ್ತುವರಿ ಭೂಮಿಯನ್ನು ಕಾಲುದಾರಿ ಹಾಗೂ ಸ್ಮಶಾನ ಭೂಮಿಗಾಗಿ ತೆರವುಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯು ತಾಪಂ ಅನಿರ್ಬಂಧಿತ ಅನುದಾನ ಯೋಜನೆಯಡಿ ಸರ್ಕಾರಿ ಶಾಲೆಗಳ ಕೊಠಡಿ ದುರಸ್ತಿ,ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸುವುದು, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಬಾಲಸ್ನೇಹಿ ಆಟದ ಸಾಮಗ್ರಿಗಳು,ಸರ್ಕಾರಿ ಪ್ರೌಢಶಾಲೆಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ಇನ್ವರ್ಟರ್ ಸೇರಿದಂತೆ ಅನೇಕ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಅರ್‌ಎಲ್‌ಎಂ) ಅಡಿ ಶ್ರೀದುರ್ಗಾ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಸಮುದಾಯ ಬಂಡವಾಳ ನಿಧಿ ಯೋಜನೆಯಡಿ ಸಾಲವಿತರಣೆಗೆ ಸುಮಾರು 11 ಲಕ್ಷ ರೂ.ಒದಗಿಸಲಾಗಿದೆ.
ವಿಕಲಚೇತನರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಧನ ಸೇರಿದಂತೆ ಅನೇಕ ಸೌಲಭ್ಯಗಳನ್ನು ವಿತರಿಸಲಾಗಿದೆ.
ಕೃಷಿ ಇಲಾಖೆಯು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ ಸುಮಾರು 17.44 ಲಕ್ಷ ರೂ. ಸೇರಿ ಬದು ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣಕ್ಕೆ ನೆರವು ನೀಡಲಾಯಿತು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿವೇತನ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ವರ್ಗಾವಣೆ ಸೌಕರ್ಯ ಕಲ್ಪಿಸಿದೆ.
ತೋಟಗಾರಿಕೆ ಇಲಾಖೆಯು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 61 ಲಕ್ಷ ರೂ.ಸಹಾಯಧನ, ಪಿಎಂಕೆಎಸ್‌ವೈ ಅಡಿ ಹನಿ ನೀರಾವರಿ ಅಳವಡಿಕೆಗೆ 18 ಲಕ್ಷ ರೂ.ಸಹಾಯಧನ ಒದಗಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ಅಂತರ್ಜಾತಿ ವಿವಾಹ ನೆರವು ಕಾರ್ಯಕ್ರಮದಡಿ 14 ದಂಪತಿಗಳಿಗೆ 39 ಲಕ್ಷ ರೂ.ನೆರವು ಹಸ್ತಾಂತರ ಮಾಡಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುಮಾರು 4 ಸಾವಿರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡುಗಳು, ಸುಮಾರು 500 ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನೋಂದಣಿ ಕಾರ್ಡ್ ಸೇರಿದಂತೆ ಅನೇಕ ಸೌಕರ್ಯಗಳನ್ನು ಕಂಟನಕುಂಟೆ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ವಡ್ಡರಹಳ್ಳಿಯಲ್ಲಿ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

