ಬಳ್ಳಾರಿ, (ನ.20): ಎಸ್ ಸಿ ಸಮುದಾಯಕ್ಕೆ 15 ರಿಂದ 17 % ಹಾಗೂ ಎಸ್ ಟಿ ಸಮುದಾಯಗಳಿಗೆ 3 ರಿಂದ 7 % ಮೀಸಲಾತಿ ಹೆಚ್ಚಳ ಸಂವಿಧಾನಬದ್ಧವಾದ ನಿರ್ಧಾರವಾಗಿದ್ದು, ತಳಸಮುದಾಯದವರಿಗೆ ಸ್ವಾಭಿಮಾನದ ಬದುಕನ್ನು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಭಾರತೀಯ ಜನತಾ ಪಕ್ಷದ ಎಸ್.ಟಿ. ಮೋರ್ಚಾ ವತಿಯಿಂದ ಬಳ್ಳಾರಿಯ ಜೀ ವೃತ್ತದ ಬಳಿ ಆಯೋಜಿಸಿದ್ದ “ಎಸ್.ಟಿ.ಮೋರ್ಚಾ ಬೃಹತ್ ಸಮಾವೇಶ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎನ್ನುವ ಮೂಲಕ ಇಡೀ ಭಾರತವನ್ನು ಒಗ್ಗೂಡಿಸಿದ್ದಾರೆ. ಏಕ್ ಭಾರತ ,ಶ್ರೇಷ್ಠ ಭಾರತ ಎಂದು ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದಾರೆ. ತಳಸಮುದಾಯದವರಿಗೆ ಸ್ವಾಭಿಮಾನದ ಬದುಕನ್ನು ನೀಡಲು ಸರ್ಕಾರ, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ಸಾಮಾಜಿಕ ನ್ಯಾಯ ಒದಗಿಸಿದ ಸರ್ಕಾರದ ಯೋಜನೆಗಳು: ಸರ್ಕಾರ ಎಸ್ ಸಿ ಎಸ್ ಟಿ ಸಮುದಾಯಗಳಿಗೆ 28 ಸಾವಿರಕ್ಕೂ ಹೆಚ್ಚಿನ ಅನುದಾನವನ್ನು ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ 6 ಸಾವಿರ ಕೋಟಿ ರೂ. ನೀಡಲಾಗಿದೆ. ಎಸ್ ಟಿ ಸಮುದಾಯಕ್ಕೆ ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು. ಹಾಲು ಮತದ ಸಮುದಾಯಕ್ಕೆ ನ್ಯಾಯ ಒದಗಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಗಿನೆಲೆ ಅಭಿವೃದ್ಧಿ ಅನುದಾನ ನೀಡಿದರು. ವಾಲ್ಮೀಕಿ ಜಯಂತಿಯನ್ನು ಘೋಷಣೆ ಮಾಡಿದರು. ಸಾಮಾಜಿಕ ನ್ಯಾಯವನ್ನು ನಮ್ಮ ಸರ್ಕಾರ ಅಕ್ಷರಶ: ನೀಡಿದೆ. ಎಸ್ ಸಿ ಎಸ್ ಟಿ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಆಶಯದೊಂದಿದೆ ನಮ್ಮ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. 100 ಅಂಬೇಡ್ಕರ್ ಹಾಸ್ಟೆಲ್ ಗಳು, 50 ಕನಕದಾಸ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುತ್ತಿದೆ. ಐದು ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಐದು ಲಕ್ಷ ಯುವಕರಿಗೆ ವಿವೇಕಾನಂದ ಯುವಶಕ್ತಿ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.
ವಾಲ್ಮೀಕಿ ನಮ್ಮ ಸರ್ಕಾರಕ್ಕೆ ಸ್ಪೂರ್ತಿ: ವಾಲ್ಮೀಕಿ ರಚಿಸಿದ ರಾಮಾಯಣ, ಪವಿತ್ರ ಧರ್ಮಗ್ರಂಥಗಳಲ್ಲಿ ಒಂದು. ವಾಲ್ಮೀಕಿಯವರು ನಮಗೆ ಸ್ಪೂರ್ತಿ. ದೇಶವನ್ನು ಕಟ್ಟುವ ಕೆಲಸವನ್ನು ವಾಲ್ಮೀಕಿ ಸಮುದಾಯದವರು ಮಾಡಬೇಕು. ಮೊಘಲರನ್ನು ಹಿಮ್ಮೆಟ್ಟಿಸಿದ್ದು, ಈ ಸಮುದಾಯದ ವೀರ ನಾಯಕರು. ವೀರ ಮದಕರಿ, ಏಕಲವ್ಯ,ಬೇಡರ ಕಣ್ಣಪ್ಪ ಎಲ್ಲರೂ ವಾಲ್ಮೀಕಿ ಕುಲವನ್ನು ಶ್ರೇಷ್ಟಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಾರಿಗೆ ಹಾಗೂ ಎಸ್ಟಿ ಇಲಾಖೆಗಳ ಸಚಿವ ಬಿ. ಶ್ರೀರಾಮುಲು, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಪ್ರಭು ಚೌಹ್ವಾಣ್, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ರಾಜು ಗೌಡ ಹಾಗೂ ಮತ್ತಿತರರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

