ದೊಡ್ಡಬಳ್ಳಾಪುರ, (ನ.01): ಜಾನುವಾರುಗಳಿಗೆ ಚರ್ಮಗಂಟು ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಧ್ಯಂತ ಜನವರಿ 30ರ ವರೆಗೆ ಜಾತ್ರೆ / ಸಂತೆ / ಜಾನುವಾರು ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶಿಸಿದ್ದಾರೆ.

ಈ ಆದೇಶದಿಂದ ಡಿಸೆಂಬರ್ 20 ರಂದು ಘಾಟಿ ಸುಬ್ರಹ್ಮಣ್ಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದ ದನಗಳ ಜಾತ್ರೆ ನಿಷೇಧಕ್ಕೆ ಒಳಗಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದ್ದು. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು ಸಹ ಜಾತ್ರೆಗೆ ಬಂದು ದನಗಳ ವ್ಯಾಪಾರ ಮಾಡುತ್ತಾರೆ. ಆದರೆ ಜಿಲ್ಲಾಧಿಕಾರಿ ಆದೇಶ ರೈತರ ಸಂಭ್ರಮಕ್ಕೆ ತೊಡಕನ್ನುಂಟುಮಾಡಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈವರೆಗೂ 2037 ಜಾನುವಾರುಗಳಲ್ಲಿ ಈ ರೋಗವು ಕಂಡುಬಂದಿದ್ದು, 154 ಜಾನುವಾರುಗಳು ಮರಣಹೊಂದಿರುತ್ತವೆ . ಇದು ಒಂದು ವೈರಾಣುನಿಂದ ಹರಡುವ ರೋಗವಾಗಿದ್ದು ಹಾಗೂ ಪ್ರಮುಖವಾಗಿ ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ ಕೀಟಗಳಿಂದ ಹರಡುತ್ತದೆ. ಈ ರೋಗವು ಕಾಣಿಸಿಕೊಂಡ ಜಾನುವಾರುಗಳು ರೋಗದಿಂದ ಸಾಕಷ್ಟು ಬಳಲುವುದರಿಂದ ಉತ್ಪಾದನೆ ಕಡಿಮೆಯಾಗುವುದಲ್ಲದೆ. ಕೆಲವೊಮ್ಮೆ ಮರಣ ಹೊಂದುತ್ತವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 1,51,526 ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ರೋಗ ಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ.
ಜಿಲ್ಲೆಯಲ್ಲಿ ಹಲವೆಡೆ ಜಾನುವಾರು ಸಂತೆ / ಜಾತ್ರೆಗಳು ನಡೆಯಲಿದ್ದು, ಇವುಗಳಿಂದ ಜಾನುವಾರುಗಳ ಸಾಗಾಣಿಕೆ / ಚಲನವಲನದಿಂದ ಹಾಗೂ ಹಲವಾರು ಜಾನುವಾರುಗಳನ್ನು ಒಂದೆಡೆ ಸೇರಿಸುವುದರಿಂದ ರೋಗೋದ್ರೇಕವು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ 1,62,980 ದನ / ಎಮ್ಮೆಗಳಿದ್ದು , ರೋಗೋದ್ರೇಕವನ್ನು ನಿಯಂತ್ರಿಸದಿದ್ದಲ್ಲಿ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುವ ಸಂಭವವಿರುವುದರಿಂದ ಜಿಲ್ಲೆಯಾದ್ಯಂತ ಜಾನುವಾರು ಜಾತ್ರೆ / ಸಂತೆಗಳನ್ನು ಎರಡು ತಿಂಗಳ ಅವಧಿಗೆ Karnataka Animal Diseases ( Control Act ) , 1961 ರಡಿ ಮತ್ತು ಸಿಆರ್‌ಪಿಸಿ ಕಲಂ 144 ರ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸುವಂತೆ ಆದೇಶಿಸಲು ಉಪನಿರ್ದೇಶಕರು , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಕೋರುತ್ತಾರೆ.
ಈ ಹಿನ್ನಲೆಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಜಾನುವಾರು ಸಂತೆಗಳಿಂದ ಆಗುವ ಸಾಗಾಣಿಕೆ / ಚಲನವಲನದಿಂದ ಹಾಗೂ ಹಲವಾರು ಜಾನುವಾರುಗಳನ್ನು ಒಂದೆಡೆ ಸೇರಿಸುವುದರಿಂದ ರೋಗೋದ್ರೇಕವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ಜಾನುವಾರು ಸಂತೆ / ಜಾತ್ರೆಗಳನ್ನು ಸ್ಥಗಿತಗೊಳಿಸುವುದು ಸೂಕ್ತ ಎಂದು ಮನಗಂಡು ಈ ಕೆಳಕಂಡಂತೆ ಆದೇಶಿಸಲಾಗಿದೆ.
ಆದೇಶ ಸಂಖ್ಯೆ: ಜಾ.ರೋ.ನಿ / 1320 / 2022-23, ದಿನಾಂಕ: 30.11.2022 ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣದಿಂದ ಲತಾ ಆರ್ , ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ , ಬೆಂಗಳೂರು ಗ್ರಾಮಾಂತರ ಜಿಲ್ಲೆ ಆದ ನಾನು ಜಾನುವಾರುಗಳಿಗೆ ಚರ್ಮಗಂಟು ರೋಗ ( Lumpy Skin disease ) ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ The Prevention and control of infectious and Contagious Diseases in Animals Act 2009 Section 12 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy Skin disease ) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ದಿನಾಂಕ: 30.01.2023 ರ ಸಂಜೆ 6.00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಜಾನುವಾರುಗಳ ಜಾತ್ರೆ / ಸಂತೆ / ಸಾಗಾಣಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
