ಒಂದು ಚಿಕ್ಕಗ್ರಾಮ ಇತ್ತು. ಆ ಗ್ರಾಮದ ಮಧ್ಯದಲ್ಲಿ ಒಂದು ಪ್ರಮುಖ ದಾರಿ ಇತ್ತು. ಆ ದಾರಿಯ ಮಧ್ಯದಲ್ಲಿ ಬಹಳ ದಿನಗಳಿಂದ ಒಂದು ದೊಡ್ಡ ಬಂಡೆಗಲ್ಲು ಬಿದ್ದಿತ್ತು. ಹೋಗ ಬರುವುದಕ್ಕೆ ಅದು ತುಂಬಾ ಅಡಚಣೆಯಾಗಿತ್ತು. ಜನರೆಲ್ಲ ಅದರ ಬದಿಯಿಂದ ಹೋಗುತ್ತಿದ್ದರೇ ವಿನಾ ಅದನ್ನು ತೆಗೆಯುವ ಮನಸ್ಸು ಮಾಡಿರಲಿಲ್ಲ.
ಒಂದು ದಿನ ಒಬ್ಬ ಪ್ರಾಮಾಣಿಕ ಬಡಮನುಷ್ಯನು ತುಂಬಾ ಪ್ರಯಾಸದಿಂದ ಆ ಬಂಡೆಗಲ್ಲನ್ನು ತೆಗೆದು ಬದಿಗಿಟ್ಟು ದಾರಿಯನ್ನು ಸ್ವಚ್ಛಗೊಳಿಸಿದ. ಅಷ್ಟರಲ್ಲಿ ಅವನಿಗೆ ಆ ಬಂಡೆಗಲ್ಲಿನ ಕೆಳಗಿದ್ದ ಒಂದು ಪೆಟ್ಟಿಗೆ ಕಂಡಿತು. ಅದನ್ನು ಆ ಗ್ರಾಮದ ರಾಜನಿಗೆ ಒಪ್ಪಿಸಿದ.
ರಾಜನು ಅದನ್ನು ಒಡೆದು ನೋಡಿದ, ಅದರಲ್ಲಿ ನೂರು ಚಿನ್ನದ ನಾಣ್ಯಗಳ ನಿಧಿ ಜೊತೆಗೊಂದು ಪತ್ರ ಇತ್ತು..! ಕುತೂಹಲದಿಂದ ರಾಜನು ಪತ್ರವನ್ನು ಓದಿದ. ಅದರಲ್ಲಿ ಹೀಗೆ ಬರೆದಿತ್ತು. “ಯಾರು ಈ ಬಂಡೆಗಲ್ಲನ್ನು ತೆಗೆದು ದಾರಿಯನ್ನು ಶುಚಿಗೊಳಿಸುವರೋ ಅವರೇ ಈ ನಿಧಿಯ ಒಡೆಯರು!” ನಂತರ ರಾಜನು ಆ ನಿಧಿಯನ್ನು ಬಡವನಿಗೆ ಒಪ್ಪಿಸಿದ.
ಆ ನಂತರ ಆ ಗ್ರಾಮದ ಸುತ್ತಮುತ್ತಲಿನ ರಸ್ತೆಗಳೆಲ್ಲ ತಮಗೆ ತಾವೇ ನಿರ್ಮಲವಾದವು! ಜನಜೀವನವು ಸುಗಮವಾಗಿತ್ತು. ಹಿಂದಿನ ರಾಜನು ಪ್ರಜೆಗಳಿಗೆ ಬಾಹ್ಯಶುಚಿಯನ್ನು ಕಲಿಸುವುದಕ್ಕೆ ಮಾಡಿದ ಉಪಾಯ ಅದಾಗಿತ್ತು..!!
ಕೃಪೆ: ಶ್ರೀ ಸಿದ್ಧೇಶ್ವರಸ್ವಾಮೀಜಿ. ಸಂಗ್ರಹ ವರದಿ : ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

