ದೊಡ್ಡಬಳ್ಳಾಪುರ, (ಡಿ.09): ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಮತ್ತು ಕೆ.ಎಸ್.ಎಫ್.ಸಿ. ಯೋಜನೆಗಳು ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ ನಗರದ ಡಿಸೆಂಬರ್ 12ರಂದು ನಗರದ ಡಿಪಿವಿ ಕನ್ವೆಷನ್ ಹಾಲ್ ನಲ್ಲಿ ನಡೆಯಲಿದೆ.

ಇಂದು ಡಿಪಿವಿ ಕನ್ವೆಷನ್ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತಂತೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ( Kassia) ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ಮಾಹಿತಿ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಜವಳಿ ಅಭಿವೃದ್ಧಿ ಮತ್ತು ನಿರ್ದೆಶಕರು, ಜವಳಿ ಮತ್ತು ಕೈಮಗ್ಗ ಇಲಾಖೆಯ ಆಯುಕ್ತ ಟಿ.ಹೆಚ್.ಎಂ.ಕುಮಾರ್ ಭಾಗವಹಿಸುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ತನ್ನ ಯೋಜನೆಗಳ ಮೂಲಕ ಸಿದ್ಧ ಉಡುಪುಗಳ ಉದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಈ ಉದ್ಯಮದಲ್ಲಿ ಸಣ್ಣ ಪ್ರಮಾಣದ ಉದ್ಯಮಿಗಳನ್ನು ಸಬಲೀಕರಣಗೊಳಿಸುತ್ತಿದೆ. ಜವಳಿ ಮತ್ತು ಸಿದ್ಧ ಉಡುಪುಗಳ ನೀತಿಯಿಂದಾಗಿ ಬೆಂಗಳೂರು ಇಂದು ಭಾರತದ ಸಿದ್ಧ ಉಡುಪುಗಳ ರಾಜಧಾನಿ ಎಂದು ಕರೆಯಲ್ಪಡುತ್ತಿದೆ.
ದೊಡ್ಡಬಳ್ಳಾಪುರವನ್ನು ಜವಳಿ ಗಣಿಯಾಗಿಸುವ, ಉದ್ಯೋಗ ಸೃಷ್ಟಿಸುವುದು, ಸರ್ಕಾರದ ಅನುದಾನವನ್ನು ನೇಕಾರರಿಗೆ ದೊರಕಿಸುವುದು ಸೇರಿದಂತೆ ಜವಳಿ ಉದ್ಯಮಿಗಳಿಗೆ ಅನುದಾನವನ್ನು ದೊರಕಿಸಲು ಈ ಸಂವಾದ ನಡೆಸಲಾಗುತ್ತಿದೆ ಎಂದರು.
ಕರ್ನಾಟಕವು ಭಾರತದಲ್ಲಿ ಎರಡನೇ ಅತಿದೊಡ್ಡ ಜವಳಿ ಉದ್ಯೋಗದಾತವಾಗಿದೆ. ಒಂದು ಅಂದಾಜಿನ ಪ್ರಕಾರ , ರಾಜ್ಯವು ಸುಮಾರು ರೂ.75.000 ಕೋಟಿ ಮೌಲ್ಯದ ರಾಷ್ಟ್ರೀಯ ಸಿದ್ಧ ಉಡುಪುಗಳ ಉತ್ಪಾದನೆಯ ಶೇ.20 ರಷ್ಟು ಮತ್ತು ರಾಷ್ಟ್ರೀಯ ರಫ್ತುಗಳ ಶೇ.11 ರಷ್ಟು ಸಿದ್ಧ ಉಡುಪುಗಳನ್ನು ಉತ್ಪಾದಿಸುತ್ತದೆ.
ಜವಳಿ ಕ್ಷೇತ್ರವೂ ರಾಜ್ಯದಲ್ಲಿ ಸುಮಾರು 6 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ. ರಪ್ತಿಗೆ ಸಂಬಂಧಿಸಿದಂತೆ, ರಾಜ್ಯವು ದೇಶದ ಶೇಕಡಾ 24 ರಷ್ಟು ಮೌಲ್ಯದ ರೇಷ್ಮೆ ಸರಕುಗಳನ್ನು ರಫ್ತು ಮಾಡುತ್ತದೆ ಮತ್ತು ದೇಶದ ಕಚ್ಚಾ ರೇಷ್ಮೆಯ ಶೇಕಡಾ 65 ರಷ್ಟು ಉತ್ಪಾದಿಸುತ್ತದೆ.
ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಉಣ್ಣೆಯನ್ನು ಉತ್ಪಾದಿಸುವ ರಾಜ್ಯಗಳಲ್ಲಿ ಒಂದಾಗಿದೆ, ಹಾಗೂ ರಾಷ್ಟ್ರೀಯ ಬೆಳವಣಿಗೆಗೆ ಶೇಕಡಾ 12 ರಷ್ಟು ಕೊಡುಗೆಯನ್ನು ನೀಡುತ್ತಿದೆ. ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಜವಳಿ ಪಾರ್ಕ್‌ಗಳಿಗೆ ಮೂಲಸೌಕರ್ಯಗಳ ಬೆಂಬಲವನ್ನು ನೀಡುತ್ತಿದೆ.
ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಕರ್ನಾಟಕ ರಾಜ್ಯವನ್ನು ದೇಶದ ಜವಳಿ ಮತ್ತು ಉಡುಪು ವಲಯದಲ್ಲಿ ಪ್ರಮುಖ ತಾಣವಾಗಿ ಮತ್ತಷ್ಟು ಬಲಪಡಿಸಲು ಮತ್ತು ಜವಳಿ ಮೌಲ್ಯ ಸರಪಳಿಯನ್ನು ಚಿನ್ನದ ಗಣಿ ಮೌಲ್ಯ ಸರಪಳಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯು ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಜಿಸುವ ಹಾಗೂ 10,000 ಕೋಟಿ ರೂ.ಗಳ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. Pittietex Prashant Pittie
ಭಾರತದ ಸಿದ್ಧ ಉಡುಪುಗಳ ರಾಜಧಾನಿಯಾಗಿ ಕರ್ನಾಟಕದ ಸ್ಥಾನವನ್ನು ಉಳಿಸಿಕೊಳ್ಳುವುದು ಮತ್ತು ಬಂಡವಾಳದ ಒಳಹರಿವು, ತಂತ್ರಜ್ಞಾನ ವರ್ಗಾವಣೆ, ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕೌಶಲ್ಯ ಉನ್ನತೀಕರಣದ ಮೂಲಕ ಇಡೀ ಜವಳಿ ಮೌಲ್ಯ ಸರಪಳಿಯಲ್ಲಿ ಉನ್ನತ ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವುದು ಗುರಿಯಾಗಿದೆ. ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ರಾಜ್ಯದಲ್ಲಿ ಸಮಗ್ರ ಜವಳಿ ಮತ್ತು ಸಿದ್ಧ ಉಡುಪುಗಳ ಪರಿಸರ ವ್ಯವಸ್ಥೆಯನ್ನು ರಚಿಸುವ ಉದ್ದೇಶದಿಂದ ನೂಲುವ, ನೇಯುವ, ಏಕೀಕೃತ ಘಟಕ ಮತ್ತು ಸಂಸ್ಕರಣೆ ಮತ್ತು ತಾಂತ್ರಿಕ ಜವಳಿ ವಲಯಗಳನ್ನು ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019 2024 ರಲ್ಲಿ ಫಸ್ಟ್ ಸೆಕ್ಟರ್‌ಗಳಾಗಿ ಗುರುತಿಸಲಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ನೇಕಾರ ಉದ್ಯಮಿಗಳೊಂದಿಗೆ ಸಂವಾದ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಸಿಯಾ ಉಪಾಧ್ಯಕ್ಷ ಶಶಿಧರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಿ.ಪ್ರವೀಣ್, ನಗರ ಜಂಟಿ ಕಾರ್ಯದರ್ಶಿ ಎಸ್.ವೆಂಕಟೇಶನ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಭೀಮಾಶಂಕರ್ ಪಾಟೀಲ, ಉಪಸಮಿತಿ ಪ್ಯಾನಲ್ ಛೇರ್ಮೆನ್ ಡಿ.ವಿ.ಜಗದೀಶ್, ಸಹ ಅಧ್ಯಕ್ಷ ದಿನೇಶ್, ಸದಸ್ಯರಾದ ನಂದಕುಮಾರ್, ಶ್ರೀನಿವಾಸ್, ವತ್ಸಲಾ, ಗಿರಿಜಾ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
