ದೊಡ್ಡಬಳ್ಳಾಪುರ, (ಡಿ.14): ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಕನ್ನಡ ಜ್ಯೋತಿಯನ್ನು ಹೊತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ಕನ್ನಡ ರಥಕ್ಕೆ ಬುಧವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರವೇಶಿಸಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಗಡಿ ಗ್ರಾಮವಾದ ಗುಂಜೂರಿನಲ್ಲಿ ಲಂಬಾಣಿ ತಾಂಡದ ಮಹಿಳೆಯರ ಸಾಂಪ್ರದಾಯಿಕ ನೃತ್ಯದೊಂದಿಗೆ ಸಂಭ್ರಮದ ಸ್ವಾಗತ ನೀಡಲಾಯಿತು.

ಬಳಿಕ, ದೊಡ್ಡಬಳ್ಳಾಪುರ ನಗರದ ಹೊರವಲಯದ ಕಂಟನಕುಂಟೆ ವೃತ್ತದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಜಾನಪದ ತಂಡಗಳು, ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಅಧಿಕೃತವಾಗಿ ರಥವನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಲಾಯಿತು. ಗ್ರಾಮದ ಮುಖ್ಯರಸ್ತೆಯಲ್ಲಿ ರಥ ಸಂಚರಿಸಿತು.

ದೊಡ್ಡಬಳ್ಳಾಪುರ ನಗರದಲ್ಲಿ ಅದ್ದೂರಿ ಚಾಲನೆ: ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿ ಕನ್ನಡ ರಥವನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಸ್ವಾಗತಿಸಲಾಯಿತು. ಈ ವೇಳೆ ಶಾಸಕ ಟಿ.ವೆಂಕಟರಮಣಯ್ಯ ರಥಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರವಾಸಿ ಮಂದಿರದಿಂದ ಹೊರಟ ಕನ್ನಡ ರಥ ಯಾತ್ರೆ ಡಿಕ್ರಾಸ್‌ನ ಡಾ.ರಾಜ್‌ಕುಮಾರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಸೌಂದರ್‍ಯಮಹಲ್ ವೃತ್ತ, ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣ, ಜಯಚಾಮರಾಜೇಂದ್ರ ವೃತ್ತ, ರಂಗಪ್ಪ ವೃತ್ತ, ಸರ್ ಎಂ.ವಿಶ್ವೇಶ್ವರಯ್ಯ ವೃತ್ತ, ಸಂಜಯನಗರ, ಕನಕದಾಸ ವೃತ್ತ, ಕಾಲೇಜು ರಸ್ತೆ, ಇಸ್ಲಾಂಪುರ, ತಾಲೂಕು ಕಚೇರಿ ವೃತ್ತ, ಬಸವ ಭವನ ವೃತ್ತದ ಮೂಲಕ ಪ್ರವಾಸಿ ಮಂದಿರ ತಲುಪಿತು. ಸುಮಾರು 8 ಕಿ.ಮೀ ದೂರ ಸಾಗಿದ ಮೆರವಣಿಗೆಗೆ ಎಲ್ಲೆಡೆ ಸಂಭ್ರಮದ ಸ್ವಾಗತ ನೀಡಲಾಯಿತು.
ಬಿಎಸ್‌ಎ ಪ್ರೌಢಶಾಲೆ, ದೇವಲ ಮಹರ್ಷಿ ಶಾಳೆ, ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಶಾಲೆ, ಅರವಿಂದ ವಿದ್ಯಾ ಸಂಸ್ಥೆ, ಎಂಎಸ್‌ವಿ ಪಬ್ಲಿಕ್ ಶಾಲೆ, ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ವಿವಿಧ ಘಟಕಗಳು, ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಸೇರಿದಂತೆ ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ನಾಡದೇವಿಯ ರಥಕ್ಕೆ ಪುಷ್ಪವೃಷ್ಟಿಗೆರೆದು ಸಂಭ್ರಮಿಸಿದರು. ಕನ್ನಡಾಭಿಮಾನಿಗಳು ಪೂಜೆ ಸಲ್ಲಿಸಿದರು.
ಕನ್ನಡ ಅಸ್ಮಿತೆ ಉಳಿಯಲಿ: ಗಣ್ಯರ ಅಭಿಮತ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಗಣ್ಯರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಅಸ್ಮಿತೆಯ ಸಂಕೇತವಾಗಿದೆ. ನಾಡದೇವಿಯ ರಥಯಾತ್ರೆ ಕನ್ನಡ ಮನಸ್ಸುಗಳನ್ನು ಸೇರಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಕಸಾಪ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡದ ಸ್ವಾಭಿಮಾಣದ ಸಂಕೇತವಾದ ಕನ್ನಡ ರಥದ ಜಾಥಾ ಹಮ್ಮಿಕೊಳ್ಳಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಚಾಲನೆಗೊಂಡಿದೆ. 14ನೇ ದಿನದ ರಥ ಯಾತ್ರೆ ಸಂಭ್ರಮದಿಂದ ನಡೆದಿರುವುದು ಸಂತಸ ತಂದಿದೆ ಎಂದರು.
ಅಭೂತಪೂರ್ವ ಸ್ವಾಗತಕ್ಕೆ ಕೃತಜ್ಞತೆ: ರಥದ ಮೇಲ್ವಿಚಾರಣೆ ಹೊತ್ತ ನಬೀ ಸಾಬ್ ಕುಷ್ಟಗಿ ಮಾತನಾಡಿ, 14 ದಿನಗಳ ರಥ ಯಾತ್ರೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ದೊರೆತ ಸ್ವಾಗತ ಅಭೂತಪೂರ್ವ ಎಂದು ಬಣ್ಣಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಸೇರಿ ರಥಕ್ಕೆ ಸ್ವಾಗತ ನೀಡಿದ್ದು ವಿಶೇಷವಾಗಿದೆ ಎಂದರು.
ಕಸಾಪ ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ಬೆಂ.ಗ್ರಾ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ, ಗೌರವ ಕಾರ್‍ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾಲೂಕು ಪಂಚಾಯಿತಿ ಕಾರ್‍ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ, ನಗರಸಭೆ ಪೌರಾಯುಕ್ತ ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ತಾಲೂಕು ಕಸಾಪ ಅಧ್ಯಕ್ಷರಾದ ದೊಡ್ಡಬಳ್ಳಾಪುರದ ಪಿ.ಗೋವಿಂದರಾಜು, ದೇವನಹಳ್ಳಿಯ ಆರ್.ಕೆ.ನಂಜೇಗೌಡ, ನೆಲಮಂಗಲದ ಆರ್.ಪ್ರದೀಪ್‌ಕುಮಾರ್, ಹೊಸಕೋಟೆಯ ಮುನಿರಾಜು, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಕರವೇ ರಾಜ್ಯ ಪ್ರಧಾನ ಕಾರ್‍ಯದರ್ಶಿ ರಾಜಘಟ್ಟ ರವಿ, ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಂಜಪ್ಪ, ಅಗ್ನಿ ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ಜಿ.ಸತ್ಯನಾರಾಯಣ್, ಆರ್.ಕೆಂಪರಾಜು, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ರಥದ ಮೇಲ್ವಿಚಾರಣೆ ಉಸ್ತುವಾರಿ ನಬೀ ಸಾಬ್ ಕುಷ್ಟಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
