ದೊಡ್ಡಬಳ್ಳಾಪುರ, (ಡಿ.15): ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಆರಂಭಿಸುವಂತೆ ಒತ್ತಾಯಿಸಿ, ನಗರದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನವೊಲಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
2022-23ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್ಸಿಎಸ್ಸಿ ಬೆಂಗಳೂರು (ದಕ್ಷಿಣ)) ರವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, 2022ರ ಡಿಸೆಂಬರ್ 15 ರಿಂದ ರಾಗಿ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಢಳಿತ ಪ್ರಕಟಣೆ ನೀಡಿತ್ತು.
ಈ ಮಾಹಿತಿ ತಿಳಿದ ರೈತರು ಬೆಳ್ಳಂಬೆಳಗ್ಗೆ ಎಪಿಎಂಸಿಗೆ ದೌಡಾಯಿಸಿದ್ದು, ಅಧಿಕಾರಿಗಳಿಗೆ ಕಾದು ಕುಳಿತಿದ್ದರು. ಆದರೆ ಸ್ಥಳದಲ್ಲಿರುವ ಅಧಿಕಾರಿಗಳು ಇಂದಿನಿಂದ ನೋದಣಿಯಿಲ್ಲ. ನಾಳೆ ಅಥವಾ ನಾಡಿದ್ದಿನಿಂದ ನೋಂದಣಿ ಮಾಡಲಾಗುವುದು ಎಂಬ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ನೋಂದಣಿ ಆರಂಭಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ನಗರ ಠಾಣೆ ಪೊಲೀಸರು, ತಹಶೀಲ್ದಾರ್ ಅವರನ್ನು ಕರೆಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ ರೈತರ ಮನವೊಲಿಸಿ, ರಸ್ತೆ ತಡೆಯನ್ನು ತೆರವುಗೊಳಿಸಿದರು.
ಪ್ರಸ್ತುತ ನೋಂದಣಿಗಾಗಿ ರೈತರಿಗೆ ಟೋಕನ್ ನೀಡಲಾಗುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

