ದೊಡ್ಡಬಳ್ಳಾಪುರ, (ಡಿ.17): ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಇಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಅವರು, ನನಗೂ ಬಿಜೆಪಿಯಿಂದ ಟಿಕೆಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಬಾಂಬ್ ಸಿಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಳೆದ 40 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹಿರಿಯರಾದ ಜಾಲಪ್ಪ. ರಾಮೇಗೌಡ, ಆರ್.ಜಿ.ವೆಂಕಟಾಚಲಯ್ಯ, ನರಸಿಂಹಸ್ವಾಮಿ ಅವರೊಂದಿಗೆ ವಿದ್ಯಾರ್ಥಿ ಜೀವನದಿಂದಲೂ ರಾಜಕೀಯ ಸೇವೆ ಸಲ್ಲಿಸಿ, ತಾಲೂಕಿನ ಪ್ರತಿ ಗ್ರಾಮದ ಜನರ ಅಭಿಮಾನ ಪಡೆದಿದ್ದೇನೆ.
ತಾಲೂಕು ಸೊಸೈಟಿ, ಪಿಎಲ್ಡಿ ಬ್ಯಾಂಕ್, ಎಪಿಎಂಸಿ, ಜಿಲ್ಲಾಪಂಚಾಯಿತಿ ಅಧ್ಯಕ್ಷನಾಗಿ, ಕೇಂದ್ರ ರೇಷ್ಮೆ ಮಂಡಲಿ ಸದಸ್ಯನಾಗಿ, ರಾಜ್ಯ ಕೃಷಿ ಮಾರುಕಟ್ಟೆ ನಿರ್ದೇಶಕನಾಗಿ, ಸಹಕಾರಿ ಯೂನಿಯನ್ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ನನಗೂ ಅವಕಾಶ ನೀಡಿ ಎಂದು ವರಿಷ್ಠರು, ಮುಖಂಡರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ.
ವರಿಷ್ಠರು ಟಿಕೇಟ್ ನೀಡಿದರೆ ಪ್ರತೀ ಹಳ್ಳಿಯಲ್ಲಿ ಪಕ್ಷದ ಸಂಘಟನೆ, ಶಿಸ್ತಿನ ಅನ್ವಯ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಇಲ್ಲವಾದರೆ ಯಾರಿಗೆ ಟಿಕೆಟ್ ನೀಡಿದರು ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ಸ್ಥಳೀಯನಾದ ನನಗೆ ಆಧ್ಯತೆ ನೀಡಿ: ತಾಲೂಕಿನಲ್ಲಿ ಬೇರೆ ಬೇರೆಯವರು ಬಂದು ಟಿಕೆಟ್ ಕೇಳುತ್ತಿದ್ದಾರೆ. ಅವರಿಗೆ ಎಂಪಿ, ಎಂಎಲ್ಸಿ ಸೇರಿದಂತೆ ಬೇರೆ ಬೇರೆ ಅವಕಾಶಗಳಿವೆ. ನಾನು ಸ್ಥಳೀಯ ಬೇರೆಯವರಿಗೆ ಅವಕಾಶ ನೀಡುವ ಬದಲು ನನಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಧೀರಜ್ಗೆ ಎಂಪಿ ಸ್ಥಾನ ನೀಡಲಿ: ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಂಚಾಲಕ ಧೀರಜ್ ಮುನಿರಾಜು ಅವರಿಗೆ ಲೋಕಸಭೆ ಟಿಕೆಟ್ ನೀಡಲಿ ಅಥವಾ ಈ ವರ್ಷ ನನ್ನನ್ನು ಗೆಲ್ಲಿಸಿ, ಮುಂದಿನ ವರ್ಷ ಅವರಿಗೆ ನೀಡಲಿ. ಅವರು ತಾಲೂಕಿಗೆ ಬಂದು ಎರಡು ಮೂರು ವರ್ಷವಾಗಿದೆ. ನಾನು ರಾಜಕೀಯಕ್ಕೆ ಬಂದು ಮೂವತ್ತು, ನಲವತ್ತು ವರ್ಷವಾಗಿದೆ. ಅವರಿನ್ನು ವಯಸ್ಸಿನಲ್ಲಿ ಚಿಕ್ಕವರು ಅವಕಾಶ ಇದೆ ಎಂದರು.
ಪೂಜೆಗಷ್ಟೇ ತೆರಳಿದ್ದೆ: ವಸಂತ್ ಕುಮಾರ್ ಗೌಡ ಅವರ ಕಚೇರಿ ಪೂಜೆಗೆ ತಾಲೂಕು ಅಧ್ಯಕ್ಷರ ಕರೆಯ ಮೇಲೆ ತೆರಳಿದ್ದೆ ಅಷ್ಟೆ. ಆ ವೇಳೆ ವಸಂತ್ ಕುಮಾರ್ ಗೌಡ ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಬಂದಿರುವೆ ಎಂದರು. ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಚೆನ್ನಾಗಿದೆ ಎಂದು ಅಲ್ಲಿಯೇ ಹೇಳಿದ್ದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಶ್ವಥ್ ನಾರಯಣಗೌಡ, ವೆಂಕಟಾಚಲಯ್ಯ, ರುದ್ರಪ್ಪ, ವೇಣುಕುಮಾರ್, ಪ್ರಕಾಶ್ ಕುಮಾರ್, ಗೋಪಾಲ್ ನಾಯಕ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

