ದೊಡ್ಡಬಳ್ಳಾಪುರ, (ಡಿ.28): ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು. ಆಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸೇರಿದಂತೆ ಮಹಿಳಾ ಪರವಾದ ಕಾನೂನುಗಳು ಜಾರಿಗೆ ಬರಲು ಸಾಧ್ಯವಾಗಲಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮಹಿಳೆಯರಿಗೆ ಶೇ 33ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಸ್ವಾಭಿಮಾನಿ ಕನ್ನಡದ ಹೆಣ್ಣೇ ಪವಿತ್ರ ರಾಜಕಾರಣಕ್ಕೆ ಮುಂದಾಗು ಅಭಿಯಾನ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಶಿವಶಂಕರ್ ಹೇಳಿದರು.
ಅವರು ಮಂಗಳವಾರ ನಗರದಲ್ಲಿ ಕೆಆರ್ಎಸ್ ಪಕ್ಷದ ವತಿಯಿಂದ ಇಂದಿರಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಅಭಿಯಾನದ ಜಾಥದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸ್ವಚ್ಛ ಆಡಳಿತ ಜಾರಿಗೆ ಬರಲು ಮಹಿಳೆಯರ ಪಾತ್ರವು ಮುಖ್ಯ. ಈ ಹಿನ್ನೆಲೆಯಲ್ಲಿಯೇ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಜಾಗೃತಿ ಅಭಿಯಾನ ನಡೆಯುತ್ತಿದೆ. ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಮಾತ್ರ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲಾಗಿದೆ. ಇದೇ ಮಾದರಿ ರಾಜ್ಯ ವಿಧಾನಸಭೆ ಸೇರಿದಂತೆ ಎಲ್ಲಾ ಹಂತದ ಆಡಳಿತದಲ್ಲೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆಬರುವ ಸಮರ್ಥ ಮಹಿಳಾ ಅಭ್ಯರ್ಥಿಗಳ ಚುನಾವಣ ವ್ಯಚ್ಛವನ್ನು ಕೆಆರ್ಎಸ್ ಪಕ್ಷದ ವತಿಯಿಂದಲೇ ಭರಿಸಲಾಗುವುದು ಎಂದರು.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ನಡೆಸಿರುವ ಭ್ರಷ್ಟ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ಬಾರಿ ರಾಜ್ಯದ ಜನರು ಎಚ್ಚೆತ್ತಿದ್ದಾರೆ. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ ಮತ ಚಲಾವಣೆ ಮಾಡುವಂತೆ ಮತದಾರರಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜೆ.ವೆಂಕಟೇಶ್ ಮೂರ್ತಿ, ತಾಲ್ಲೂಕು ಅಧ್ಯಕ್ಷ ಡಿ.ಆರ್.ಉಮಾಶಂಕರ್, ಉಪಾಧ್ಯಕ್ಷ ಸುರೇಶ್ ಗೌಡ, ನಗರ ಘಟಕದ ಅಧ್ಯಕ್ಷ ರಾಮಕೃಷ್ಣ,ಮುಖಂಡರಾದ ನರೇಂದ್ರಕುಮಾರ್, ಅಫೀಜ್, ಧನಂಜಯ, ದರ್ಶನ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….