ದೊಡ್ಡಬಳ್ಳಾಪುರ, (ಡಿ.28): ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಸುಬ್ರಮಣ್ಯ ಘಾಟಿ ಪುಣ್ಯಕ್ಷೇತ್ರದಲ್ಲಿ ಬುಧವಾರದಂದು ಸ್ವಾಮಿಯ ಬ್ರಹ್ಮರಥೋತ್ಸವ ಅತ್ಯಂತ ವೈಭವದಿಂದ ನಡೆಯಿತು.
ಸಾವಿರಾರು ಜನ ಭಕ್ತಾಧಿಗಳು ರಾಜ್ಯದ ಹಲವು ಪ್ರದೇಶಗಳಿಂದಲೇ ಅಲ್ಲದೇ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದಲೂ ರಥೋತ್ಸವಕ್ಕೆ ಆಗಮಿಸಿದ್ದರು.
ಬುಧವಾರ ಮಧ್ಯಾಹ್ನ 11-55 ಗಂಟೆಗೆ ಸ್ವಾಮಿಯನ್ನು ಪ್ರತಿಷ್ಠಿಸಲಾಗಿದ್ದ ತೇರನ್ನು ಅರ್ಚಕರ ವೇದಘೋಷಗಳ ನಡುವೆ ಭಕ್ತಾಧಿಗಳು ಎಳೆದರು.
ಸುಮಾರು 600 ವರ್ಷಗಳ ಇತಿಹಾಸವಿರುವ ಘಾಟಿ ಪುಣ್ಯಕ್ಷೇತ್ರದಲ್ಲಿ ಶ್ರೀ ಸುಬ್ಯಮಣ್ಯ ಸ್ವಾಮಿ ಸರ್ಪ ರೂಪದಲ್ಲಿ ನೆಲೆಸಿದ್ದಾರೆ.
ದೇವಾಲಯದ ಗರ್ಭಗುಡಿಯಲ್ಲಿರುವ ಏಕಶಿಲೆ ವಿಗ್ರಹದಲ್ಲಿ ಮುಂಭಾಗದಲ್ಲಿ ಸುಬ್ರಮಣ್ಯ,ಹಿಂಭಾಗದಲ್ಲಿ ನರಸಿಂಹಸ್ವಾಮಿ ನೆಲೆಸಿರುವುದು ಘಾಟಿಕ್ಷೇತ್ರದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣುವುದಿಲ್ಲ.ಸರ್ಪ ದೋಷ ಮತ್ತು ಕುಜದೋಷಗಳಿರುವವರು ಇಲ್ಲಿ ನಾಗರಕಲ್ಲನ್ನು ಪ್ರತಿಷ್ಠಿಸಿ ಪೂಜಿಸಿದರೆ ದೋಷನಿವಾರಣೆಯಾಗುತ್ತದೆಂಬುದು ಅದೇರೀತಿ ಇಲ್ಲಿನ ದೇವಾಲಯದ ಹಿಂಭಾಗದಲ್ಲಿರುವ ಕಳ್ಯಾಣಿಗಳಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ವಾಸಿಯಾಗುತ್ತವೆ ಎಂದು ಭಕ್ತಾಧಿಗಳ ವಿಶ್ವಾಸ.
ಘಾಟಿ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿನಿತ್ಯವೂ ಎಲ್ಲೆಂದರಲ್ಲಿ ಸರ್ಪಗಳು ಕಾಣಿಸುತ್ತಿರುತ್ತವೆಂದು. ಆದರೆ ಸರ್ಪಗಳಿಗೆ ಗ್ರಾಮಸ್ತರಾಗಲಿ,ಗ್ರಾಮಸ್ತರಿಗೆ ಸರ್ಪಗಳಾಗಲೀ ಯಾವುದೇ ಹಾನಿ ಮಾಡುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಶ್ರೀ ಸುಬ್ರಹ್ಮಣ್ಯಸ್ವಾಮಿಯ ದರ್ಶನ ಪಡೆಯಲು ಬೆಳಗಿನಿಂದಲೇ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಸವಿತಾ ಯುವ ಜನ ವೇದಿಕೆ, ಆಂಧ್ರ ದೇವಾಂಗ ಸಂಘ, ನಗರ್ತರ ಸಂಘ ಸೇರಿದಂತೆ ವಿವಿಧ ಭಕ್ತ ಮಂಡಲಿಗಳಿಂದ ಅರವಂಟಿಗೆ ಹಾಗೂ ಅನ್ನ ಸಂತರ್ಪಣೆಗಳನ್ನು ಏರ್ಪಡಿಸಲಾಗಿತ್ತು.
ಆರೋಗ್ಯ ಶಿಕ್ಷಣ ವಸ್ತು ಪ್ರದರ್ಶನ: ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದ ಬ್ರಹ್ಮರಥೋತ್ಸವ ಹಾಗೂ ಜಾತ್ರೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಇಸಿ ವಿಭಾಗದಿಂದ ಆರೋಗ್ಯ ಇಲಾಖೆ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಮತ್ತು ಎಲ್ ಇ ಡಿ ಮೂಲಕ ವಿಡಿಯೋ ಪ್ರದರ್ಶನ ಹಮ್ಮಿಕೊಳ್ಳಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಎಸ್ ಎಸ್ ಘಾಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….